ಮಡಿಕೇರಿ, ನ. 3: ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ನಿರ್ದೇಶನ ನೀಡಿದ್ದಾರೆ. ಶನಿವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದನ್ನು ನಿಷೇಧಿಸಲಾಗಿದೆ. ಆದರೂ ಹಲವು ಕಡೆಗಳಲ್ಲಿ ಧೂಮಪಾನ ಮಾಡುವದು ಕಂಡು ಬರುತ್ತಿದೆ. ಈ ಬಗ್ಗೆ ದಂಡ ಹಾಕುವದರ ಜೊತೆಗೆ, ಅರಿವು ಮೂಡಿಸುವದು ಅತ್ಯಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ರೇಡಿಯೋ ಕಾರ್ಯಕ್ರಮ ಹಮ್ಮಿಕೊಳ್ಳುವದು, ಗೋಡೆ ಬರಹ, ವಿವಿಧ ರೀತಿಯಲ್ಲಿ ಸಂದೇಶಗಳ ಮೂಲಕ ಮಾಹಿತಿ ನೀಡುವದು, ಸಂತೆ, ಜನಸಂದಣಿ ಪ್ರದೇಶದಲ್ಲಿ ಬೀದಿ ನಾಟಕ ಏರ್ಪಡಿಸುವದು, ಹಾಡಿಗಳಲ್ಲಿ ವಿಶೇಷ ಅಭಿಯಾನ ಆಯೋಜಿಸು ವದು, ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ತಿಳಿಸಿದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾಹಿತಿ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದನ್ನು ಪತ್ತೆಹಚ್ಚಿ 170 ಪ್ರಕರಣಗಳನ್ನು

(ಮೊದಲ ಪುಟದಿಂದ) ದಾಖಲಿಸಲಾಗಿದ್ದು, ಅಕ್ಟೋಬರ್ ಅಂತ್ಯದವರೆಗೆ ದಂಡ ರೂಪದಲ್ಲಿ 99,900 ರೂ. ಸಂಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಅವರು ಮಾಹಿತಿ ನೀಡಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆಯಂತೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮ ಅಧಿಕಾರಿ ಡಾ. ಶಿವಕುಮಾರ್ ಮಾಹಿತಿ ನೀಡಿ ಶಾಲಾ-ಕಾಲೇಜಿನ 100 ಗಜ ವ್ಯಾಪ್ತಿಯಲ್ಲಿ ತಂಬಾಕನ್ನು ಮಾರಾಟ ಮಾಡುವಂತಿಲ್ಲ ಎಂದು ಮಾಹಿತಿ ನೀಡಿದರು.

ಸರ್ಕಾರಿ ಕಚೇರಿಗಳಲ್ಲಿ ಕೋಟ್ಪಾ-2003ರ ಸೆಕ್ಷನ್ 4ರ ನಾಮಫಲಕಗಳನ್ನು ಅಳವಡಿಸುವದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕ ಮತ್ತು ಪ್ಲಾಷ್ ಸ್ಲೈಡ್ ಮುಖಾಂತರ ತಂಬಾಕು ನಿಯಂತ್ರಣ ಬಗ್ಗೆ ಮಾಹಿತಿ ನೀಡುವದು. ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ತಂಬಾಕು ನಿಷೇಧದ ಬಗ್ಗೆ ಪ್ರಚಾರ ಮಾಡುವದು. ಎಲ್ಲಾ ಪ್ರವಾಸಿ ತಾಣಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕಾರ್ಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ನಿಲೇಶ್, ಡಾ. ಎ.ಸಿ. ಶಿವಕುಮಾರ್, ಜಿಲ್ಲಾ ವಿಕಲಚೇತನರ ಅಧಿಕಾರಿ ದೇವರಾಜು, ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ವಿಶ್ವನಾಥ್ ಇತರರು ಇದ್ದರು.