ಮಡಿಕೇರಿ, ನ. 3: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆ ಆನೆ ಶಿಬಿರ ಬಳಿ ಕಾವೇರಿ ಹೊಳೆಯಲ್ಲಿ ಪ್ರವಾಸಿಗರಿಗಾಗಿ ರ್ಯಾಫ್ಟಿಂಗ್ ನಡೆಸುವ ದಿಸೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊಳೆಯ ನೀರಿನ ಮಟ್ಟ ಕುರಿತಾಗಿ ಖುದ್ದು ಪರಿಶೀಲಿಸಿ ಸೂಕ್ತ ವರದಿ ನೀಡಬೇಕೆಂದು ಕೊಡಗು ಜಿಲ್ಲಾಧಿಕಾರಿ ಹಾಗೂ ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಪಿ.ಐ. ಶ್ರೀವಿದ್ಯಾ ಆದೇಶಿಸಿದ್ದಾರೆ.ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಪ್ರತಿನಿಧಿಗಳ ಸಭೆ ನಡೆಯುವದರೊಂದಿಗೆ ರ್ಯಾಫ್ಟಿಂಗ್ ನಡೆಸುವ ವೇಳೆ ಹೊಳೆಯಲ್ಲಿ ನೀರಿನ ಸೌಕರ್ಯ ಸಮರ್ಪಕವಿದೆಯೇ ಎಂದು ಪರಿಶೀಲಿಸಿ ಕಾವೇರಿ ನೀರಾವರಿ ನಿಗಮದಿಂದ ವರದಿ ನೀಡುವಂತೆ ಸಂಬಂಧಿಸಿದ ಅಭಿಯಂತರ ರಾಜೇಗೌಡ ಅವರಿಗೆ ಸೂಚಿಸಿದ್ದಾರೆ.ಅಲ್ಲದೆ, ರ್ಯಾಫ್ಟಿಂಗ್ ನಡೆಸುವ ವೇಳೆ ಯಾವದೇ ಅನಾಹುತಗಳಿಗೆ ಅವಕಾಶವಾಗದಂತೆ ಮತ್ತು ಪ್ರವಾಸಿಗರ ಸಹಿತ ಯಾರಿಗೂ ಜೀವಹಾನಿ ಇತ್ಯಾದಿಗೆ ಎಡೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮದೊಂದಿಗೆ, ವಿಮೆ ವ್ಯವಸ್ಥೆ ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.

ಮಾರ್ಗಸೂಚಿಸಿ : ಒಂದು ವೇಳೆ ಈಗಾಗಲೇ ಕುಂಠಿತಗೊಂಡಿರುವ ಪ್ರವಾಸೋದ್ಯಮಕ್ಕೆ ಮತ್ತೆ ರ್ಯಾಫ್ಟಿಂಗ್‍ನಿಂದ ಪ್ರೋತ್ಸಾಹಿಸಲು ಅಗತ್ಯ ಮಾರ್ಗಸೂಚಿ ಸೂತ್ರಗಳನ್ನು ರೂಪಿಸಲಾಗಿದ್ದು, ಅಂಥ ಸೂತ್ರಗಳ ಕಡ್ಡಾಯ ಅನುಷ್ಠಾನಕ್ಕೆ ಪ್ರವಾಸೋದ್ಯಮ, ಲೋಕೋಪಯೋಗಿ ಇಲಾಖೆ, ಅಗ್ನಿ ಶಾಮಕದಳ, ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ತಮ್ಮ ಪಾಲಿನ ಕರ್ತವ್ಯಗಳನ್ನು ಚಾಚೂ ತಪ್ಪದೆ ಅನುಸರಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಮಾತ್ರವಲ್ಲದೆ ರ್ಯಾಫ್ಟಿಂಗ್ ಮಾಲೀಕರು ಹಾಗೂ ಗೈಡ್ ಗಳೊಂದಿಗೆ ಸಂಬಂಧಿಸಿದ ರಕ್ಷಕರು ಕೂಡ ತಮಗೂ ಮತ್ತು ಪ್ರವಾಸಿಗರಿಗೆ ಯಾವ ರೀತಿಯಲ್ಲೂ ತೊಂದರೆಯಾಗ ದಂತೆ ಮಾರ್ಗಸೂಚಿ ಪಾಲಿಸಲು ಶ್ರೀವಿದ್ಯಾ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಇಲಾಖೆಗಳ ನಿರಾಕ್ಷೇಪಣಾ ಪತ್ರದೊಂದಿಗೆ ಮಾರ್ಗಸೂಚಿಗೆ ಸಮ್ಮತಿಸಿದರೆ ಮಾತ್ರ ರ್ಯಾಫ್ಟಿಂಗ್ ಮುಂದುವರಿಯಲಿದ್ದು, ಆ ದಿಸೆಯಲ್ಲಿ ಶೀಘ್ರವೇ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ : ಈ ಕುರಿತು ‘ಶಕ್ತಿ’ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರನ್ನು ಸಂಪರ್ಕಿಸಿದಾಗ ರ್ಯಾಫ್ಟಿಂಗ್ ಸಂಬಂಧ ಖಾಸಗಿ ವ್ಯಕ್ತಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೊಕದ್ದಮೆ ವಜಾಗೊಂಡಿದ್ದು, ಆ ಹಿನ್ನೆಲೆಯಲ್ಲಿ ಪ್ರಸಕ್ತ ತಮ್ಮ ಅಧ್ಯಕ್ಷತೆಯಲ್ಲಿರುವ ನಿರ್ವಹಣಾ ಸಮಿತಿಯು ಜಿಲ್ಲೆಯಲ್ಲಿ ರ್ಯಾಫ್ಟಿಂಗ್‍ಗೆ ನೀತಿ ನಿರೂಪಣೆ ಕೈಗೊಂಡಿರುವದಾಗಿ ಸ್ಪಷ್ಟಪಡಿಸಿದರು. ಅಲ್ಲದೆ, ವಿವಿಧ ಇಲಾಖೆಗಳಿಂದ ಲಭಿಸಲಿರುವ ಮಾಹಿತಿ ವರದಿಯೊಂದಿಗೆ ರ್ಯಾಫ್ಟಿಂಗ್ ಪೂರಕ ನೀರಿನ ವ್ಯವಸ್ಥೆ ಇತ್ಯಾದಿ ಬಗ್ಗೆ ಕಾವೇರಿ ನಿಗಮ ಅಧಿಕಾರಿಗಳ ಮಾಹಿತಿ ಆದರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿರುವದಾಗಿ ಸುಳಿವು ನೀಡಿದರು.