ಸೋಮವಾರಪೇಟೆ, ನ. 3: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ವಾಹನ ಸವಾರರಿಗೆ ನೆರವಾಗಿದ್ದಾರೆ.
ಕಾಲೇಜು ಮುಂಭಾಗ ಹಾದುಹೋಗಿರುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ಮರಳು, ಕಲ್ಲುಗಳು ಶೇಖರಣೆಗೊಂಡಿದ್ದು, ಆಗಾಗ್ಗೆ ಇಲ್ಲಿ ಅವಘಡಗಳು ಸಂಭವಿಸುತ್ತಲೇ ಇತ್ತು. ದ್ವಿಚಕ್ರ ವಾಹನಗಳು ಹಲವಷ್ಟು ಬಾರಿ ಸ್ಕಿಡ್ ಆಗಿ, ಸವಾರರು ಗಾಯಗೊಳ್ಳುತ್ತಿದ್ದರು. ಇದನ್ನು ಖುದ್ದು ವೀಕ್ಷಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು, ರಸ್ತೆಯ ಬದಿಯಲ್ಲಿ ಶೇಖರಣೆಗೊಂಡಿದ್ದ ಮರಳು ಮತ್ತು ಕಲ್ಲಿಗೆ ಸ್ವಯಂ ಪ್ರೇರಣೆಯಿಂದ ಮುಕ್ತಿ ನೀಡಿದರು.
ಮಳೆಯಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ಶೇಖರಣೆಗೊಂಡಿದ್ದ ಮಣ್ಣುಮಿಶ್ರಿತ ಮರಳು, ಕಲ್ಲುಗಳನ್ನು ತೆಗೆದರಲ್ಲದೇ, ಪೊರಕೆಯಿಂದ ಗುಡಿಸಿದರು. ಇದರಿಂದಾಗಿ ರಸ್ತೆಯ ಎರಡೂ ಬದಿ ಸ್ವಚ್ಛಗೊಂಡಿದ್ದು, ವಾಹನ ಸವಾರರಿಗೆ ಸುರಕ್ಷಿತ ಚಾಲನೆಗೆ ಅನುವು ಮಾಡಿದಂತಾಗಿದೆ.
ವಿದ್ಯಾರ್ಥಿಗಳ ಶ್ರಮದಾನ ಸಂದರ್ಭ ಕಾಲೇಜು ಪ್ರಾಂಶುಪಾಲ ಶರಣ್, ಉಪನ್ಯಾಸಕರಾದ ಯೋಗೇಶ್‍ಕುಮಾರ್, ಮನು, ಕಾವ್ಯ, ಭವ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.