ಕುಶಾಲನಗರ, ನ. 3: ಕುಶಾಲನಗರ ಪಟ್ಟಣದ ಜನತೆಯ ಬಹುದಿನಗಳ ನಿರೀಕ್ಷೆಯಾಗಿದ್ದ ಉಪ ನೋಂದಣಾಧಿಕಾರಿ ಕಚೇರಿ ಇದೀಗ ಲೋಕಾರ್ಪಣೆಗೊಂಡಿದ್ದು ನಾಗರಿಕರ ಕನಸೊಂದು ನನಸಾಗಿದೆ. ಸೋಮವಾರಪೇಟೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಹಾಗೂ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಕುಶಾಲನಗರಕ್ಕೆ ಕಳೆದ ಕೆಲವು ವರ್ಷಗಳ ಹಿಂದೆ ಸರಕಾರ ನೂತನ ಕಚೇರಿಗೆ ಹಸಿರು ನಿಶಾನೆ ತೋರಿಸಿದ್ದರೂ ಕಾರಣಾಂತರಗಳಿಂದ ಕಚೇರಿ ಆರಂಭ ನೆನೆಗುದಿಗೆ ಬಿದ್ದಿತ್ತು. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಕುಶಾಲನಗರ ಅಂದಿನಿಂದ ಬಹುತೇಕ ತಾಲೂಕು ಮಟ್ಟದ ಕಚೇರಿಗಳನ್ನು ಹೊಂದಿದ್ದರೂ ನೂತನ ತಾಲೂಕು ರಚನೆಯಾಗುವಲ್ಲಿ ವಿಫಲಗೊಂಡಿದೆ.
ಡಿವೈಎಸ್ಪಿ ಕಚೇರಿ, ಕಂದಾಯ ಕಚೇರಿ, ಉಪ ಖಜಾನೆ, ಸರಕಾರಿ ಇಂಜಿನಿಯರಿಂಗ್ ಕಾಲೇಜು, ಸೈನಿಕ ಶಾಲೆ, ಕ್ರೀಡಾ ಶಾಲೆ, ಅಗ್ನಿಶಾಮಕ ಠಾಣೆ, ಸ್ನಾತಕೋತ್ತರ ಕೇಂದ್ರ, ನ್ಯಾಯಾಲಯ, ಅರಣ್ಯ ಸಿಬ್ಬಂದಿ ತರಬೇತಿ ಕೇಂದ್ರ, ಕೈಗಾರಿಕಾ ಬಡಾವಣೆ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಉಪ ನೋಂದಣಾಧಿಕಾರಿ ಕಚೇರಿ ಸೇರ್ಪಡೆಗೊಂಡಿದೆ.
ಆದರೆ ಬಹುದಿನಗಳಿಂದ ಮಂಜೂರಾಗಿರುವ ವಿಶೇಷ ತಹಶೀಲ್ದಾರ್ ಕಚೇರಿ, ರಸ್ತೆ ಸಾರಿಗೆ ಡಿಪೋ ಕಚೇರಿಗಳು ಮಾತ್ರ ಇನ್ನೂ ದಾಖಲೆಗಳಲ್ಲಿ ಉಳಿದಿವೆ. ಪ್ರಸಕ್ತ ಪಟ್ಟಣದ ಗೌಡ ಸಮಾಜ ರಸ್ತೆ ವ್ಯಾಪ್ತಿಯ ಪಟೇಲ್ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆರಂಭಗೊಂಡಿರುವ ನೋಂದಣಿ ಕಚೇರಿ ಕಾಯ್ದೆ 1908 ಉಪ ಕಲಂ 1, 2 ಹಾಗೂ 5 ರ ಕೇಂದ್ರೀಯ ಕಾಯ್ದೆಯಡಿ ಕಾರ್ಯನಿರ್ವಹಿಸಲಿದೆ. ಕುಶಾಲನಗರ ಹೋಬಳಿಯ 61 ಗ್ರಾಮಗಳು, ಮಡಿಕೇರಿ ನೋಂದಣಿ ಕಚೇರಿಯಿಂದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ 8 ಗ್ರಾಮಗಳನ್ನು ಕುಶಾಲನಗರದ ನೋಂದಣಿ ಕಚೇರಿ ಕಾರ್ಯವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಎಸ್. ಸಿದ್ದೇಶ್ ಮಾಹಿತಿ ನೀಡಿದ್ದಾರೆ.
ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಅಂದಗೋವೆ, ಕಾನ್ಬೈಲ್, ಬೈಚನಹಳ್ಳಿ, ಹುಲುಗುಲಿ, ನಾಕೂರು ಶಿರಂಗಾಲ, ಅತ್ತೂರು ನಲ್ಲೂರು, ಶುಂಟಿಕೊಪ್ಪ, ಗರಗಂದೂರು, 7ನೇ ಹೊಸಕೋಟೆ, ಮಳೂರು, ಪಾದ್ರೆ, ಹೆರೂರು ಮತ್ತು ಕುಶಾಲನಗರ ಹೋಬಳಿಯ ಎಲ್ಲಾ ಗ್ರಾಮಗಳು ಸೇರಿದಂತೆ 69 ಗ್ರಾಮಗಳು ಕುಶಾಲನಗರ ನೋಂದಣಿ ಕಚೇರಿಗೆ ಒಳಪಡಲಿದೆ. ಈ ಮೊದಲು ಈ ವ್ಯಾಪ್ತಿಯ ನಾಗರಿಕರು ನೋಂದಣಿ ಕೆಲಸಕ್ಕೆ ತಾಲೂಕು ಕೇಂದ್ರವಾದ ಸೋಮವಾರಪೇಟೆಗೆ ತೆರಳಬೇಕಿತ್ತು. ಈ ಮೂಲಕ ಸಮಯದ ಅಭಾವದೊಂದಿಗೆ ದೂರದ ಪ್ರದೇಶದ ಜನರಿಗೆ ಅನಾನುಕೂಲತೆ ಉಂಟಾಗಿತ್ತು. ನೂತನ ಕಚೇರಿಗೆ ಸೋಮವಾರಪೇಟೆ ಉಪ ನೋಂದಣಾಧಿಕಾರಿ ಅವರನ್ನು ಪ್ರಭಾರ ಅಧಿಕಾರಿಯಾಗಿ ನಿಯೋಜಿ ಸುವದರೊಂದಿಗೆ ಕಚೇರಿಗೆ ಪ್ರಥಮ ಹಾಗೂ ದ್ವಿತೀಯ ದರ್ಜೆ ಗುಮಾಸ್ತರನ್ನು ನೇಮಕ ಮಾಡಲು ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಸಿದ್ದೇಶ್ ಮಾಹಿತಿ ನೀಡಿದ್ದಾರೆ. ನೂತನವಾಗಿ ಆರಂಭಗೊಂಡಿರುವ ಕುಶಾಲನಗರ ಉಪ ನೋಂದಣಾಧಿ ಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಕಚೇರಿಯನ್ನು ಕೂಡ ತೆರೆಯಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಎಸ್. ಸಿದ್ದೇಶ್ ತಿಳಿಸಿದ್ದಾರೆ. ನೆನೆಗುದಿಗೆ ಬಿದ್ದಿರುವ ಕುಶಾಲನಗರ ವಿಶೇಷ ತಹಶೀಲ್ದಾರ್ ಕಚೇರಿ ಸಧ್ಯದಲ್ಲಿಯೇ ಲೋಕಾರ್ಪಣೆ ಗೊಳ್ಳಲಿದೆ ಎಂದು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಹುದಿನಗಳ ಯೋಜನೆಯಾಗಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಕೂಡ ಸಧ್ಯದಲ್ಲಿಯೇ ಕುಶಾಲನಗರದಲ್ಲಿ ಪ್ರಾರಂಭಗೊಳ್ಳುವ ಇರಾದೆಯನ್ನು ಸಚಿವರು ತಿಳಿಸಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗುವದು ಎಂದಿದ್ದಾರೆ. ಕ್ಷೇತ್ರದ ಶಾಸಕರು ಸೇರಿದಂತೆ ಕುಶಾಲನಗರದ ಪ್ರಮುಖ ರಾದ ಆರ್.ಕೆ. ನಾಗೇಂದ್ರಬಾಬು, ಕೆ.ಪಿ. ಚಂದ್ರಕಲಾ, ಎಸ್.ಎನ್. ನರಸಿಂಹ ಮೂರ್ತಿ, ಫಜಲುಲ್ಲಾ, ವಿ.ಪಿ. ಶಶಿಧರ್ ಮತ್ತಿತರರ ಶ್ರಮದಿಂದ ಪಟ್ಟಣ ವ್ಯಾಪ್ತಿಗೆ ಬರಬೇಕಾದ ಪ್ರಮುಖ ಕಚೇರಿಗಳ ತುರ್ತು ಅವಶ್ಯಕತೆ ಯೊಂದು ಇದೀಗ ಈಡೇರಿದ್ದು ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ. - ಚಂದ್ರಮೋಹನ್