ಶನಿವಾರಸಂತೆ, ನ. 3: ಮುಳ್ಳೂರು ನಿಡ್ತ ಮೀಸಲು ಅರಣ್ಯದಲ್ಲಿ ಪತ್ತೆಯಾದ ಪುರುಷ ಹಾಗೂ ಮಹಿಳೆಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶನಿವಾರ ನಡೆಯಿತು.ಮೃತ ದಿಲೀಪ್ ಗಿಲ್ಬರ್ಟ್ (40) ಎಂಬವರಿಗೆ ಸೋಮವಾರಪೇಟೆ ಬಳಿ ಬಜೆಗುಂಡಿ ಗ್ರಾಮದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಸಾವಿತ್ರಿ (32) ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವನವಳ್ಳಿ ಗ್ರಾಮದ ನಿವಾಸಿ. ಈಕೆಯ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ.ದಿಲೀಪ್ ಮತ್ತು ಸಾವಿತ್ರಿ ಇಬ್ಬರ ನಡುವೆ ಅನೈತಿಕ ಸಂಬಂಧವಿದ್ದು, ವಿವಾಹವಾಗಲು ನಿರ್ಧರಿಸಿದ್ದರು. ಕುಟುಂಬದವರು ವಿರೋಧಿಸಿದ್ದು, ವಿವಾದ ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ತೀರ್ಮಾನವಾಗಿತ್ತು. ಇಬ್ಬರ ಕುಟುಂಬಸ್ಥರು ಸಮ್ಮತಿಸದ ಕಾರಣ ಮನೆ ಬಿಟ್ಟು ಹೋಗಿ ನಿಡ್ತ ಮೀಸಲು ಅರಣ್ಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ದಿನಗಳ ಬಳಿಕ ಕೊಳೆತು ಗುರುತಿಸದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭ ಎಸ್.ಐ. ಎಚ್.ಎಂ. ಮರಿಸ್ವಾಮಿ, ಹೆಡ್ ಕಾನ್ಸ್‍ಟೇಬಲ್‍ಗಳಾದ ಶಿವಣ್ಣ, ಬೋಪಣ್ಣ, ಸಿಬ್ಬಂದಿ ಕೆ.ಎಂ. ಪ್ರದೀಪ್ ಕುಮಾರ್, ಸವಿತಾ, ಹರೀಶ್ ಹಾಗೂ ಮೃತರ ಬಂಧುಗಳು ಹಾಜರಿದ್ದರು.