ಕುಶಾಲನಗರ, ನ. 3: ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭ ವ್ಯಕ್ತಿಯೊಬ್ಬ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಸಮಾಧಾನ ಭುಗಿಲೆದ್ದಿದೆ. ಪರಾಭವಗೊಂಡ ಅಭ್ಯರ್ಥಿಗಳು ಮಧ್ಯವರ್ತಿಯೊಬ್ಬನನ್ನು ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆದಿದೆ. ಸೋಲುಂಡರೂ ಇವರಿಗೆ ಪೀಕಲಾಟ ತಪ್ಪಿಲ್ಲ.

ಗುಂಡೂರಾವ್ ಬಡಾವಣೆಯಲ್ಲಿ ಪರವೂರಿನಿಂದ ವಲಸೆ ಬಂದು ನೆಲೆಸಿರುವ ಕಾರ್ಮಿಕ ಕುಟುಂಬಗಳ 25ಕ್ಕೂ ಅಧಿಕ ಮತಗಳನ್ನು ಖರೀದಿ ಮಾಡುವ ಭರದಲ್ಲಿ ಅಭ್ಯರ್ಥಿಗಳು ತಾಮುಂದು ನಾಮುಂದು ಎಂಬಂತೆ ಮದ್ಯವರ್ತಿಯೊಬ್ಬನಿಗೆ ಒಟ್ಟು 3 ಲಕ್ಷ ರೂ. ಗಳಿಗೂ ಅಧಿಕ ಹಣ ನೀಡಿದ್ದು, ಬೆಳಕಿಗೆ ಬಂದಿದೆ. ಇದೀಗ ಸೋಲುಂಡ ಇಬ್ಬರು ಅಭ್ಯರ್ಥಿಗಳು ಮಧ್ಯವರ್ತಿಯ ವಂಚನೆ ತಿಳಿದು ತಮ್ಮ ಹಣ ಹಿಂತಿರುಗಿಸುವಂತೆ ಒತ್ತಡ ಹೇರಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಪ್ರಕರಣ ಪೊಲೀಸ್ ಠಾಣೆ ತಲಪಿದೆ. ಪೊಲೀಸರ ಮದ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದೆ. ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಬಿತ್ತರಗೊಳ್ಳುತ್ತಿರುವದು ಪ್ರಜ್ಞಾವಂತ ನಾಗರಿಕರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಕುಶಾಲನಗರ ಪಟ್ಟಣದ ಕೆಲವು ವಾರ್ಡ್‍ಗಳಲ್ಲಿ ಲಕ್ಷಗಟ್ಟಲೆ ಹಣ ಮತದಾರರ ಕಿಸೆ ಸೇರಿದ್ದು, ಪರಾಭವಗೊಂಡ ಅಭ್ಯರ್ಥಿಗಳು ವಂಚಕ ಮತದಾರರಿಗೆ ಹಗಲು ರಾತ್ರಿ ಎನ್ನದೆ ಹಿಡಿಶಾಪ ಹಾಕುತ್ತಿರುವದು ಗುಪ್ತವಾಗಿ ಉಳಿದಿಲ್ಲ. ಒಂದು ಅಂದಾಜಿನ ಪ್ರಕಾರ ಕುಶಾಲನಗರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ ಪಡೆಯುವ ಭರಾಟೆಯಲ್ಲಿ ಹಲವು ಕೋಟಿ ರೂ. ಹಣ ಕೈಬದಲಾಗಿರುವ ಆರೋಪವಿದೆ.

ಈ ರೀತಿಯ ಬೆಳವಣಿಗೆ ಸಮಾಜಕ್ಕೆ ಒಳಿತಲ್ಲ ಎನ್ನುವದು ಕೆಲವು ಹಿರಿಯ ಅಭಿಪ್ರಾಯವಾಗಿದೆ. -ಸಿಂಚು