ಸೋಮವಾರಪೇಟೆ,ನ.4 : ರೇಬಿಸ್ ಒಂದು ವೈರಾಣುವಿನಿಂದ ಪ್ರಾಣಿಗಳಿಂದ ಹರಡುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಂದ ಮಾತ್ರ ರೋಗ ಹರಡುವದನ್ನು ತಡೆಯಬಹುದು ಎಂದು ಸುಳ್ಯದ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹೇಳಿದರು.
ಜಿಲ್ಲಾ ಪಂಚಾಯಿತಿ, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಇಲ್ಲಿನ ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ "ನಾಯಿ ಹುಚ್ಚು ರೋಗ(ರೇಬಿಸ್)" ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ರೇಬಿಸ್ ಬಗೆಗಿನ ಮಾಹಿತಿ ಕೊರತೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿರುವದು, ರೇಬಿಸ್ ಪೀಡಿತ ಪ್ರಾಣಿಗಳಿಂದ ಕಚ್ಚಿಸಿಕೊಂಡರೂ ಚಿಕಿತ್ಸೆ ಪಡೆದುಕೊಳ್ಳದಿರುವದು ಹಾಗೂ ಮೂಢನಂಬಿಕೆಗಳಿಗೆ ದಾಸರಾಗಿರುವದರಿಂದ ಸಾವು ನೋವುಗಳು ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಿದರು.
ನಾಯಿ ಅಥವಾ ಕಾಡು ಪ್ರಾಣಿಗಳು ಕಚ್ಚಿದಾಗ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮನೆಯಲ್ಲೇ ಪ್ರಥಮ ಚಿಕಿತ್ಸೆಯಾಗಿ ಗಾಯವನ್ನು ನೀರಿನಿಂದ ಬಟ್ಟೆ ಒಗೆಯುವ ಸಾಬೂನು ಅಥವ ಸರ್ಫ್ನಿಂದ ತೊಳೆಯಬೇಕು. ಆಲ್ಕೋಹಾಲ್, ಸ್ಪಿರಿಟ್, ಅಥವ ಅಯೋಡಿನ್ ದ್ರಾವಣದಿಂದ ಉಪಚರಿಸಬೇಕು. ಗಾಯಕ್ಕೆ ಬ್ಯಾಂಡೆಜ್ ಕಟ್ಟಬಾರದು, ಹೊಲಿಯಬಾರದು, ಅರಿಸಿನ, ನಿಂಬೆಹುಳಿ, ಮೆಣಸಿನ ಹುಡಿ, ಕಾಫಿಪುಡಿ ಹಾಕಬಾರದು, ಯಾವದೇ ಸೊಪ್ಪುಗಳನ್ನು ಕಟ್ಟುವದರಿಂದ, ನಾಡು ಔಷಧಿಯಿಂದ ರೇಬಿಸ್ ರೋಗವನ್ನು ವಾಸಿ ಮಾಡಲು ಸಾಧ್ಯವಿಲ್ಲ ಎಂದು ವೈದ್ಯಾಧಿಕಾರಿ ಮಾಹಿತಿಯಿತ್ತರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೇಬಿಸ್ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕುಮಾರ್ ಸೂಚಿಸಿದರು. ಸಾಕು ಪ್ರಾಣಿಗಳಿಗೆ ರೇಬಿಸ್ ನಿಯಂತ್ರಣ ಲಸಿಕೆ ಹಾಕಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳ ಉಪನಿರ್ದೇಶಕ ಡಾ.ಎ.ಬಿ.ತಮ್ಮಯ್ಯ, ಸಹಾಯಕ ನಿರ್ದೇಶಕರುಗಳಾದ ನಾಗರಾಜ್, ಎಸ್.ಎಸ್. ಆನಂದ್ ಉಪಸ್ಥಿತರಿದ್ದರು.