ಶಬರಿ ಎಂಬ ವೃದ್ಧೆಯು ಶ್ರೀರಾಮನಿಗಾಗಿ ಹಲವಾರು ವರ್ಷ ತಪಸ್ಸು ಮಾಡಿದಳು. ಒಂದು ಹಣ್ಣನ್ನುಶ್ರೀರಾಮನಿಗೆ ಅರ್ಪಿಸಲು, ಒಂದು ಕ್ಷಣ ಆತನ ದರ್ಶನ ಪಡೆಯಲು ತನ್ನ ಜೀವನವನ್ನೇ ಮುಡಿಪಾಗಿಸಿದವಳು ಶಬರಿ ಎಂಬ ಹೆಣ್ಣು.

ಶಬರಿಮಲೆ ತನ್ನ ಹೆಸರನ್ನು ಪಡೆದದ್ದು ಈ ಶಬರಿಯಿಂದಲೇ. ಒಂದು ಹೆಣ್ಣಿನ ಹೆಸರು ಇರುವ ಈ ಮಲೆಯನ್ನು ಹೆಣ್ಣುಮಕ್ಕಳು ಏರಲು ನಿರ್ಬಂಧ ಹೇರುವುದು ಸರಿಯೇ? ಈ ನಿರ್ಬಂಧದಿಂದ ಹೆಣ್ಣಿನ ಸಮಾನತೆಗೆ ಧಕ್ಕೆಯಾಗಿದೆಯೇ? ನಮ್ಮ ಭಾರತದ ಸರ್ವೋಚ್ಛ ನ್ಯಾಯಾಲಯ ಈ ಬಗ್ಗೆ ನೀಡಿರುವ ತೀರ್ಪನ್ನು ನಾವು ಪ್ರಶ್ನಿಸಬಹುದೇ? ಹೀಗೆ ಎಷ್ಟೋ ಪ್ರಶ್ನೆಗಳು ನಮ್ಮನ್ನು ಇತ್ತೀಚೆಗೆ ಕಾಡುತ್ತಿವೆ. ವಿಚಾರವಾದಿಗಳು ಎನಿಸಿಕೊಂಡವರ ವಿಚಾರಗಳು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಬಿಂಬಿಸಿ ಪ್ರಶಂಸಿಸುತ್ತಿದೆಯೇ ಹೊರತು, ನಮ್ಮ ಮನದಾಳದ ತಳಮಳವನ್ನು ಅರ್ಥೈಸಿ ಉತ್ತರಿಸುವಲ್ಲಿ ವಿಫಲವಾಗಿದೆ.

ನಮ್ಮ ಭಾರತದಲ್ಲಿ ಎಲ್ಲ ಕಾನೂನು ಕಾಯ್ದೆಗಳ ಮೂಲ ಸ್ವರೂಪ ಇರುವುದು ನಮ್ಮ ಭಾರತದ ಸಂವಿಧಾನದಲ್ಲಿ. ಈ ನಮ್ಮ ಸಂವಿಧಾನದ ಅನುಚ್ಛೇದ 14ರಲ್ಲಿ ಸಮಾನತೆಯನ್ನು ಎಲ್ಲಾ ವರ್ಗದ ಜನರಿಗೂ ಕಾಯ್ದಿರಿಸಬೇಕು, ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಕ್ಕು ಹಾಗೂ ಕರ್ತವ್ಯ ಎಂದು ತಿಳಿಸುತ್ತದೆ. ಅದೇ ರೀತಿ ನಮ್ಮ ಸಂವಿಧಾನದ ಅನುಚ್ಛೇದ 21 ಎಲ್ಲರಿಗೂ ಬದುಕುವ ಹಕ್ಕನ್ನು ನೀಡುತ್ತದೆ.

ಈ ನಿಟ್ಟಿನಲ್ಲಿ 10-50 ವರ್ಷದ ಮಹಿಳೆಯರನ್ನು ದೇವಸ್ಥಾನದ ಒಳಗೆ ಪ್ರವೇಶ ನಿಷೇಧಿಸುವುದು ಅನುಚ್ಛೇದ 14 ಪ್ರಕಾರ ನಮ್ಮ ಸಂವಿಧಾನ ಹೇಳಿರುವ ಸಮಾನತೆಗೆ ವಿರುದ್ಧವಾದದ್ದು ಎಂಬದು ನಮ್ಮ ಸರ್ವೋಚ್ಛ ನ್ಯಾಯಾಲಯದ ಅನಿಸಿಕೆ.

1991ರಲ್ಲಿ ಕೇರಳ ಉಚ್ಚ ನ್ಯಾಯಾಲಯ ಶಬರಿಮಲೆಗೆ 10-50 ವರ್ಷದೊಳಗಿನ ಮಹಿಳೆಯರು ಪ್ರವೇಶಕ್ಕೆ ನಿರ್ಬಂಧಹೇರಿತ್ತು. ಈ ನಿರ್ಬಂಧ ಹೇರುವಾಗ ಕೇರಳ ಉಚ್ಛ ನ್ಯಾಯಾಲಯ ಗಮನಿಸಿದ ಅಂಶಗಳೆಂದರೆ, ಭಾರತದಲ್ಲಿ ಧರ್ಮ ಎಂಬದು ಸರ್ವ ಶ್ರೇಷ್ಟವಾದ ವಿಚಾರ; ಧರ್ಮದ ವಿಚಾರದಲ್ಲಿ ಹಾಗೂ ಪಾರಂಪರಿಕವಾಗಿ ಬಂದಂತಹ ಆಚಾರಗಳಲ್ಲಿ, ನ್ಯಾಯಾಲಯಗಳು ಮೂಗು ತೂರಿಸುವಂತದ್ದು ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸಮಂಜಸವಲ್ಲವೆಂದು.

ಆದರೆ, ಈ ನಿರ್ಧಾರದ ಮೇಲೆ ಮೇಲ್ಮನವಿ ಹೋದಾಗ, ಅಂದರೆ 28 ಸೆಪ್ಟೆಂಬರ್ 2018 ರಂದು ನಮ್ಮ ಭಾರತದ ಸರ್ವೋಚ್ಛ ನ್ಯಾಯಾಲಯವು ಕೇರಳ ಉಚ್ಛನ್ಯಾಯಾಲಯದ ತೀರ್ಪನ್ನು ಒಪ್ಪಲಿಲ್ಲ ಹಾಗೂ ಈ ರೀತಿಯ ನಿರ್ಬಂಧನೆ ಸಂವಿಧಾನಕ್ಕೆ ಚ್ಯುತಿ ತರುವಂತದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಈ ಒಂದು ತೀರ್ಪನ್ನು ಹೊರಹಾಕಲು ನಮ್ಮ ಸರ್ವೋಚ್ಛ ನ್ಯಾಯಾಲಯ ಕೆಲವು ಕಾರಣಗಳನ್ನು ಈ ರೀತಿಯಾಗಿ ನೀಡಿತು.

1. ಧರ್ಮದ ವಿಚಾರದಲ್ಲಿ ನ್ಯಾಯಾಂಗ ಪ್ರವೇಶಿಸುವುದು ಸರಿ. ಈ ಹಿಂದೆಯೂ ಪ್ರವೇಶಿಸಿದೆ. ಉದಾಹರಣೆಗೆ; ಮುಂಬೈನ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೆ ನ್ಯಾಯಾಂಗದ ತೀರ್ಪಿನಿಂದಲೇ ಪ್ರವೇಶ ದೊರಕಿದೆ. ಅದೇ ರೀತಿ ಪಾರ್ಸಿಸಮುದಾಯದವರ ಟವರ್ ಆಫ್ ಸೈಲನ್ಸ್ (ಖಿoತಿeಡಿ oಜಿ Siಟeಟಿಛಿe) ವಿಷಯದಲ್ಲಿ ಸಹ ನ್ಯಾಯಾಲಯ ತನ್ನ ತೀರ್ಪನ್ನು ನೀಡುವ ಮೂಲಕ ಧರ್ಮದ ವಿಚಾರದಲ್ಲಿ ನ್ಯಾಯಾಂಗ ಪ್ರವೇಶಿಸಿದೆ.

2. ಒಬ್ಬ ವ್ಯಕ್ತಿಯ-ವ್ಯಕ್ತಿಗಳ ಮೂಲಭೂತ ಹಕ್ಕುಗಳು ಚ್ಯುತಿಯಾದಾಗ ಅದನ್ನು ರಕ್ಷಣೆ ಮಾಡುವುದು ನ್ಯಾಯಾಂಗದ-ನ್ಯಾಯಾಲಯಗಳ ಆದ್ಯ ಕರ್ತವ್ಯ.

ಈ ವಿಚಾರಗಳನ್ನು ಸರ್ವೋಚ್ಛ ನ್ಯಾಯಾಲಯ ಪರಿಗಣಿಸಿ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ಮಹತ್ವದ ತೀರ್ಪನ್ನು ನೀಡಿತು.

ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವ/ವಿರುದ್ಧವಾಗಿ ನಡೆದುಕೊಳ್ಳುವ ಹಕ್ಕನ್ನು ಯಾವ ಪ್ರಜೆಗೂ ನಮ್ಮ ಸಂವಿಧಾನ ನೀಡಿಲ್ಲ. ನಮ್ಮ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಮಾಡುವುದು ಶಿಕ್ಷಾರ್ಹ ಅಪರಾಧ.

ಆದರೆ, ನ್ಯಾಯಾಲಯ ನೀಡಿದ ತೀರ್ಪನ್ನು ವಿಷ್ಲೇಶಿಸುವ ಹಕ್ಕು, ನಮ್ಮ ಸ್ವಂತ ಅಭಿಪ್ರಾಯವನ್ನು ಈ ವಿಷಯದಲ್ಲಿ ನೀಡುವ ಹಕ್ಕು, ಇದರ ಬಗ್ಗೆ ಚರ್ಚಿಸುವ ಹಕ್ಕನ್ನು ನಮ್ಮ ಸಂವಿಧಾನ ಕಸಿದುಕೊಂಡಿಲ್ಲದ ಕಾರಣ ನಮ್ಮ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸುವ, ಆ ತೀರ್ಪಿನ ನ್ಯೂನ್ಯತೆಗಳನ್ನು ತೋರಿಸುವ ಒಂದು ಪ್ರಯತ್ನ ಈ ಬರಹ. ಇದು ಕೇವಲ ನನ್ನ ಸ್ವಂತ ಅಭಿಪ್ರಾಯವಾಗಿರುತ್ತದೆಯೇ ಹೊರತು; ನ್ಯಾಯಾಲಯಕ್ಕೆ ಅಗೌರವ ನೀಡುವ ಯಾವ ಉದ್ದೇಶವೂ ಇದರಲ್ಲಿ ಇಲ್ಲ.

ಭಾರತ ದೇಶ ಸನಾತನ ಧರ್ಮದ ಬೇರಿನ ಮೇಲೆ ಬೆಳೆದಂತಹ ದೇಶ. ಪರಂಪರೆ ಸಂಸ್ಕೃತಿ, ಇತಿಹಾಸ ಎಲ್ಲವೂ ಇರುವುದು ಈ ಮಣ್ಣಿನಲ್ಲಿ. ನಾವು ಯಾವಾಗಲೂ ಪಾಶ್ಚಾತ್ಯ ದೇಶಕ್ಕೆ; ಅದರಲ್ಲೂ ಯುರೋಪ್, ಅಮೇರಿಕಾಗೆ ಹೋದಾಗ ನಮ್ಮನ್ನು ಬಹಳ ಗೌರವದಿಂದ ಕಾಣುತ್ತಾರೆ. ನಾವು ಭಾರತೀಯರು ಎಂದು ತಿಳಿದೊಡನೆ ನಮ್ಮ ಆಚಾರ, ವಿಚಾರ, ದೇವಸ್ಥಾನಗಳ ಬಗ್ಗೆ ವಿಚಾರಿಸುತ್ತಾರೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಪ್ರಶಂಸಿಸುತ್ತಾರೆ. ಅಲ್ಲದೇ ಪ್ರಾಚೀನತೆಯ ತಿಳುವಳಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಪಾಶ್ಚಾತ್ಯ ದೇಶದವರ ಅನುಕರಣೆಯಲ್ಲಿ ನಮ್ಮ ದೇಶದ ಯುವಪೀಳಿಗೆ ತೊಡಗಿದ್ದರೆ, ನಮ್ಮ ಸಂಸ್ಕೃತಿಯ ಅನುಕರಣೆಯಲ್ಲಿ ಪಾಶ್ಚಾತ್ಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ನಮ್ಮಲ್ಲಿರುವ ಆಯುರ್ವೇದ, ಯೋಗದ ವಿದ್ಯಾಭ್ಯಾಸಕ್ಕಾಗಿ ಸಾವಿರಾರು ಮೈಲುಗಳ ದೂರ ಕ್ರಮಿಸಿ ಇಲ್ಲಿಗೆ ಬಂದು ತಿಂಗಳುಗಟ್ಟಲೇ ಅಧ್ಯಯನ ಮಾಡುತ್ತಿದ್ದಾರೆ. ಆದರೆ ನಮಗೆ ಯಾವಾಗಲೂ ಹಿತ್ತಲ ಗಿಡ ಮದ್ದಲ್ಲ. ನಮ್ಮ ದೇಶದಲ್ಲಿ ಅಪಾರ ಸಂಪತು ಇತ್ತು. ಆದರೆ ಅವರ ಮಹತ್ವವನ್ನು ತಿಳಿಯದ ನಾವು ಅವರ ಎರಡು ಕಾಸಿನ ಬೂಟಿಗಾಗಿ ನಮ್ಮಲ್ಲಿರುವ ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಬಲಿಕೊಟ್ಟೆವು. ಜಾತಿ-ಧರ್ಮದ ಹೆಸರಿನಲ್ಲಿ ಬ್ರಿಟಿಷರು ನಮ್ಮ ದೇಶವನ್ನು ಒಡೆದರು. ಇನ್ನೂ ಆ ಒಡಕನ್ನು ತುಂಬುವ ಪ್ರಯತ್ನ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ.

ಈ ನಮ್ಮ ಭಾರತದ ಸಂಸ್ಕೃತಿಗೆ ಕಲಶ-ಕನ್ನಡಿ ಹಿಡಿಯುವುದೇ ನಮ್ಮ ಸಂಪ್ರದಾಯ, ನಮ್ಮ ಧರ್ಮ, ನಮ್ಮ ಆಚಾರ ವಿಚಾರಗಳು. ನಮ್ಮ ಧರ್ಮವೆಂದರೆ ಬರೀ ಹಿಂದೂ ಧರ್ಮ ಖಂಡಿತವಲ್ಲ. ನಮ್ಮ ಮಣ್ಣಿನಲ್ಲಿ ಬೇರೂರಿ ಅಡಕವಾಗಿರುವ ಎಲ್ಲಾ ಧರ್ಮಗಳೂ ನಮ್ಮ ಧರ್ಮಗಳೇ. ಹನ್ನೆರಡನೆಯ ಶತಮಾನದಲ್ಲಿಯೇ ಇಸ್ಲಾಂ ಧರ್ಮ ನಮ್ಮ ಮಣ್ಣಿನಲ್ಲಿ ಬೆರೆಯಿತು. ಜೈನ್-ಬೌದ್ಧ ಧರ್ಮ ಹಿಂದೂ ಧರ್ಮದಿಂದಲೆ ಹೊರಹೊಮ್ಮಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದಂತಹ ಧರ್ಮಗಳು. ಈ ರೀತಿ ಅನೇಕ ಧರ್ಮಗಳನ್ನು, ಅನೇಕ ಧಾರ್ಮಿಕ ವಿಚಾರಗಳನ್ನು ಪರಸ್ಪರ ಗೌರವಿಸಿ, ಅನೇಕತೆಯಲ್ಲಿ ಏಕತೆಯನ್ನು ಕಂಡು, ಕಾಪಾಡಿಕೊಂಡು ಬಂದಂತಹ ದೇಶ ನಮ್ಮ ಭಾರತ.

ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕಾರಣಿಗಳ ಕಾರಣದಿಂದ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದ್ದೇಯೇ ಹೊರತು, ಈ ವಿಷಯವಾಗಿ ಈ ಮಣ್ಣಿನಲ್ಲಿ ಯಾರೂ ಸಫಲರಾಗಿಲ್ಲ; ಸಫಲರಾಗುವುದೂ ಇಲ್ಲ. ನಮ್ಮ ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಂತಹ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಸಂಪೂರ್ಣ ದಕ್ಷಿಣ ಭಾರತ, ಒಡಿಸ್ಸಾದೊರಗಿನ ಈಶಾನ್ಯ ಭಾರತವನ್ನು ತನ್ನ ಸಾಮ್ರಾಜ್ಯದ ಒಳಗೆ ಸೇರಿಸಿದ ಕೀರ್ತಿ ಶ್ರೀ ಕೃಷ್ಣದೇವರಾಯ ಚಕ್ರವರ್ತಿಯದ್ದು. ಆತನ ಆತ್ಮಕಥೆÉಯ ಪ್ರಕಾರ ಆತನ ಎಲ್ಲಾ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು ಮುಸ್ಲಿಂ ಸೈನಿಕರು. ಅವನ ಮಾತಿನಲ್ಲೇ ಹೇಳುವುದಾದರೆ, ಹಿಂದೂ ಮಹಾಸಾಮ್ರಾಜ್ಯದ ನಿರ್ಮಾಣವಾದದ್ದು ಮುಸ್ಲಿಮರಿಂದ. ಮುಸ್ಲಿಂ ಸೈನಿಕರೇ ಯಾವಾಗಲೂ ಅಪಾರ ಹಿಂದೂ ಸೈನ್ಯದ ಮುಂದಾಳ್ವಿಕೆಯನ್ನು ವಹಿಸುತ್ತಿದ್ದುದರಿಂದ”.

ಇನ್ನು ಸುಮಾರು ಹೆಚ್ಚು ಕಡಿಮೆ ಐದುನೂರು ವರ್ಷಗಳ ಕಾಲ ಭಾರತವನ್ನು ಆಳಿದ ಮೊಗಲರ ಸೈನ್ಯದಲ್ಲಿ ಹಿಂದುಗಳದ್ದೇ ಹೆಚ್ಚಿನ ಸಂಖ್ಯೆ. ಪ್ರತಿಯೊಬ್ಬ ಪ್ರಮುಖ ಮುಗಲ್ ದೊರೆಯ ಆಪ್ತ ಸಲಹೆಗಾರ ಹಾಗೂ ಮಹಾ ಮುಖ್ಯಮಂತ್ರಿ ಹಿಂದುವೇ ಆಗಿರುತ್ತಿದ್ದ.

ಇವು ಕೆಲವು ನಮ್ಮ ಭಾರತದ ಧಾರ್ಮಿಕ ಸಹಬಾಳ್ವೆಯ ಉದಾಹರಣೆಗಳಷ್ಟೇ. ನಮ್ಮ ನಾಡಿನಲ್ಲಿ ಯುದ್ಧಗಳು ಆಗುತ್ತಲೇ ಇದ್ದವು. ಆದರೆ, ಎಂದೂ ಧರ್ಮಕ್ಕಾಗಿ, ಧರ್ಮದ ಹೆಸರಿನಲ್ಲಿ ಯುದ್ಧ ನಡೆದಿಲ್ಲ. ಆಸ್ತಿಗಾಗಿ, ಭೂಮಿಗಾಗಿ, ಹೆಣ್ಣಿಗಾಗಿ, ಹೊನ್ನಿಗಾಗಿ ಕಾಳಗಗಳು ಆದವೇ ಹೊರತು ಧರ್ಮಕ್ಕಾಗಿ ಅಲ್ಲ. ಬ್ರಿಟೀಷರ ಭಾರತ ಪ್ರವೇಶದ ನಂತರವಷ್ಟೇ ಧರ್ಮದ ಹೆಸರಿನಲ್ಲಿ ಹೋರಾಟಗಳು ಪ್ರಾರಂಭವಾದದ್ದು. “ಒಡೆದು ಆಳು” ಎಂಬ ನೀತಿಗೆ ಭಾರತೀಯರು ಬಲಿಯಾದದ್ದು ಇದೇ ನೀತಿಯನ್ನು ಮುನ್ನಡೆಸಲು ರಾಜಕಾರಣಿಗಳು ಪ್ರಯತ್ನ ಮಾಡುತ್ತಿದ್ದಾರೆ. ಏನೇ ಇರಲಿ, ಇನ್ನು ನಮ್ಮ ಶಬರಿಮಲೆಗೆ ಸ್ತ್ರೀ ಪ್ರವೇಶದ ವಿಷಯ ತೆಗೆದುಕೊಂಡರೆ, ನಮ್ಮ ಸರ್ವೋಚ್ಛ ನ್ಯಾಯಾಲಯ ಎಡವಿದಂತೆ ತೋರಲು ಈ ಹಿನ್ನೆಲೆ ಕೆಲವು ಕಾರಣಗಳಿವೆ

1. ಧರ್ಮದ ಹೆಸರಿನಲ್ಲಿ ನ್ಯಾಯಾಲಯಗಳು ಈ ಹಿಂದೆ ಅಭಿಪ್ರಾಯ ನೀಡಿವೆಯಾದರೂ ಈಗಾಗಲೇ ಪ್ರಸ್ತಾಪಿಸಿದಂತೆ ಭಾರತದ ತಳಪಾಯವೇ ಆದ ಧರ್ಮದ ನಂಬಿಕೆಯ ಮೇಲೆ ಇದು ಪ್ರಹಾರ ನಡೆಸಿದಂತೆ.

2. ಭಾರತ ಸಂವಿಧಾನದ ಅನುಚ್ಛೇದ 14ರಲ್ಲಿ ಸಮಾನತೆಯನ್ನು ಮೂಲಭೂತ ಹಕ್ಕು ಎಂದು ತಿಳಿಸಿದ್ದರೂ ಸಹ, ಈ ಒಂದು ದೇವಸ್ಥಾನಕ್ಕೆ 10-50 ವರ್ಷ ಪ್ರಾಯದ ಮಹಿಳೆಯರ ಪ್ರವೇಶ ನಿಷೇದ ಯಾವ ರೀತಿಯ ಸಮಾನತೆಗೆ ಸಹ ಚ್ಯುತಿ ತರುವುದಿಲ್ಲ.

ಕಾರಣಗಳು ಈ ರೀತಿಯಾಗಿವೆ

1) ಕೇವಲ ಒಂದು ದೇವಸ್ಥಾನದ ಪ್ರವೇಶದಿಂದ ಮಹಿಳಾ ಸಬಲೀಕರಣವಾಗಲೀ, ಮಹಿಳಾ ಸಮಾನತೆಯಾಗಲೀ ಸಾಧ್ಯವಿಲ್ಲ. ಧರ್ಮವನ್ನು ಹೊರತು ಪಡಿಸಿ ನಮ್ಮ ದಿನನಿತ್ಯದ ವಿಚಾರಗಳಲ್ಲಿ ಸ್ತ್ರೀಗೆ ಸಮಾನತೆ ಸಿಗಬೇಕು. ನಡುರಾತ್ರಿಯಲ್ಲಿ ಸ್ತ್ರೀ ನಿರ್ಭೀತಳಾಗಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಹಿಮಾಲಯ ಪರ್ವತವನ್ನು ಏರಲು ಸಹ ಇಂದು ಸ್ತ್ರೀ ಸಾಮಾರ್ಥ್ಯವನ್ನು ಹೊಂದಿದ್ದಾಳೆ. ಹಾಗಾಗಿ ಶಬರಿಮಲೆ ಏರಿ, ಯಾರಿಗೂ ಏನನ್ನೂ ಸ್ತ್ರೀ ಸಾಬೀತು ಪಡಿಸುವಂತಹ ಅವಶ್ಯಕತೆ ಇಲ್ಲ. ಪ್ರತಿಯೊಂದು ಮನೆಯಲ್ಲಿ ಸ್ತ್ರೀಗೆ ಸಮಾನತೆ ಬೇಕು. ಪುರಷನಂತೆಯೇ, ಪುರುಷನೊಂದಿಗೆ ಸರಿಸಮಾನವಾಗಿ ದುಡಿಯುವ ಸ್ತ್ರೀಗೆ ಸಮಾನ ವೇತನ ಬೇಕು. ಹೊರಗಡೆ ಹೆಣಗಾಡಿ ದುಡಿದು ಬಂದ ಮಹಿಳೆಗೆ ಮನೆಯ ಜವಾಬ್ದಾರಿಗಳಲ್ಲಿ ಹೆಗಲು ನೀಡಿ ಸಹಕರಿಸುವ ಪುರುಷ ಮನೋಭಾವ, ಸಮಾನತೆ ಬೇಕು. ಮಗುವನ್ನು ನೈಜವಾಗಿ ಹೊರುವ, ಹೆರುವ ಶಕ್ತಿ-ಸಾಮರ್ಥ್ಯ ಕೇವಲ ಮಹಿಳೆಯದ್ದೇ ಆದರೂ; ಆ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಳ್ಳುವ ಪುರುಷರು ಮಹಿಳೆಗೆ ಸಮಾನತೆ ನೀಡಬಲ್ಲರೇ ಹೊರತು, ಒಂದು ದೇವಸ್ಥಾನಕ್ಕೆ ಪ್ರವೇಶ ನೀಡುವ ಮುಖೇನ ಖಂಡಿತ ಅಲ್ಲ. ಶಬರಿಮಲೆ ಇರುವ ಕೇರಳದಲ್ಲಿಯೇ ಎರಡು ದೇವಸ್ಥಾನಗಳಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಆ ದೇವಾಲಯಗಳು ಯಾವುವೆಂದರೆ;

1) ಅಟ್ಟುಕಲ್ಲು ಭಗವತಿ ದೇವಸ್ಥಾನ: ಈ ದೇವಸ್ಥಾನದಲ್ಲಿ ಪೆÇಂಗಲ ಉತ್ಸವ ನಡೆಯುತ್ತದೆ. ಇದರಲ್ಲಿ ಪ್ರತಿವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುತ್ತಾರೆ, ಗಿನ್ನಿಸ್ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸಹ ಈ ಉತ್ಸವ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ ಇಲ್ಲಿ ಪುರುಷರಿಗೆ ನೋ ಎಂಟ್ರಿ (ಓಔ ಇಓಖಿಖಙ).

2) ಚಕ್ಕುಲತ್ತುಕವು ದೇವಸ್ಥಾನ: ಇದು ಸಹ ಭಗವತಿ ದೇವಿಯ ಸ್ಥಾನ. ಇಲ್ಲಿ ವರ್ಷಕೊಮ್ಮೆ ನಾರಿ ಪೂಜೆಯನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

3) ಇನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಭಗವತಿಯ ಮಾ ದೇವಸ್ಥಾನದಲ್ಲಿಯೂ ಪುರುಷರಿಗೆ ಪ್ರವೇಶವಿಲ್ಲ.

4) ರಾಜಸ್ಥಾನದ ಜಗತ್ ಪ್ರಸಿದ್ಧ ಪುಷ್ಕರ್‍ನಲ್ಲಿರುವ ಬ್ರಹ್ಮನ ದೇವಸ್ಥಾನಕ್ಕೆ ಮದುವೆಯಾದ ಪುರುಷರ ಪ್ರವೇಶಕ್ಕೆ ನಿರ್ಬಂಧವಿದೆ.

5) ಹಾಗೆಯೇ ಬಿಹಾರದಲ್ಲಿರುವ ಸಂತೋಷಿ ಮಾತಾ ದೇವಸ್ಥಾನಕ್ಕೆ ಪುರುಷರು ಪ್ರವೇಶಿಸುವಂತಿಲ್ಲ.

6) ಅಸ್ಸಾಂನಲ್ಲಿರುವ ಕಾಮಖ್ಯ ದೇವಸ್ಥಾನಕ್ಕೂ ಸಹ ಪುರುಷರ ಪ್ರವೇಶ ನಿಷೇಧ. ಈ ದೇವಸ್ಥಾನಗಳ ಸಂಪ್ರದಾಯಗಳು ಸಮಾನತೆಗೆ ಧಕ್ಕೆ ತರದ ಮೇಲೆ ಶಬರಿಮಲೆಗೆ ಸ್ತ್ರೀ ಪ್ರವೇಶ ನಿಷೇಧ ಸಹ ಸಮಾನತೆಗೆ ಧಕ್ಕೆ ತರುವಂತದ್ದಲ್ಲ.

2) ಇನ್ನೊಂದು ಗಮನಾರ್ಹ ಅಂಶವೇನೆಂದರೆ, ಶಬರಿಮಲೆಗೆ ಸ್ತ್ರೀ ಪ್ರವೇಶ ಸರಿ ಎಂಬ ತೀರ್ಪನ್ನು ಐದು ಜನ ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ನೀಡಿತ್ತು. ಈ ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಯಾರೆಲ್ಲವೆಂದರೆ; ದೀಪಕ್ ವಿಶ್ರಾ, ರೋಹಿಗ್ಟಂನ್ ನಾರೀಮನ್, ಎ.ಎಂ. ಖಾನಿಲ್ಕರ್, ಡಿ.ವೈ. ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರಾ. ಇಂದು ಮಲ್ಹೋತ್ರಾ ಹಿರಿಯ ನ್ಯಾಯವಾದಿಯಾಗಿ ಆಯ್ಕೆಯಾದ ಎರಡನೇ ಮಹಿಳೆ ಮತ್ತು ಸತತವಾಗಿ 30 ವರ್ಷಗಳ ಕಾಲ ಹಿರಿಯ ನ್ಯಾಯವಾದಿಯಾಗಿ ಕೆಲಸ ಮಾಡಿರುವ ಇವರು, ಈಗ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಹಲವು ಸ್ತ್ರೀ ಪರವಾದ ಮಹತ್ತರ ತೀರ್ಪುಗಳನ್ನು ನೀಡಿದ್ದಾರೆ. ಒಂದು ಮಟ್ಟದ ಸ್ತ್ರೀವಾದಿ ಎಂದರೂ ಸಹ ತಪ್ಪಾಗುವುದಿಲ್ಲ. ಆದರೆ ಇಂತಹ ಹಿನ್ನೆಲೆ ಇರುವ ಈ ನ್ಯಾಯಾಧೀಶೆ; ಈ ಮಹತ್ತರ ತೀರ್ಪಿನ ವಿರುದ್ಧರಾಗಿದ್ದರು. ಶಬರಿಮಲೆಗೆ ಸ್ತ್ರೀ ಪ್ರವೇಶ ನಿಷೇದ ಸಂವಿಧಾನಕ್ಕೆ ಚ್ಯುತಿ ತರುತ್ತದೆ ಎಂದರೆ ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೆ ಉಳಿದ ನಾಲ್ವರು ಪುರುಷ ನ್ಯಾಯಾಧೀಶರ ಸಹಮತವಿದ್ದ ಕಾರಣ ಸ್ತ್ರೀಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶವಿದೆ ಎಂಬ ತೀರ್ಪು ಹೊರಬಿದ್ದಿತ್ತು. ಅಂದರೆ, ಸ್ತ್ರೀಯರಿಗೆ ಬೇಡವಾದ ಈ ಸಮಾನತೆಯನ್ನು ಪುರುಷರು ನೀಡಲು ಏಕೆ ಮುಂದಾದರು ಎಂಬದು ಉತ್ತರ ಸಿಗದ ಪ್ರಶ್ನೆಯಾಗಿದೆ.

3) ಸದ್ಗುರು ಹೇಳಿದ ಒಂದು ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಅದೇನೆಂದರೆ; ಮಹಿಳೆಯರ ಶೌಚಾಲಯಕ್ಕೆ ಹೋಗುವುದಕ್ಕೆ ಪುರುಷರಿಗೆ ನಿಷೇಧವಿದೆ. ಇದು ಸಂವಿಧಾನದಲ್ಲಿ ಅನುಚ್ಚೇದ 14ರ ಪ್ರಕಾರ ಸಮಾನತೆಗೆ ಚ್ಯುತಿ ತರುವುದಿಲ್ಲವೆಂದರೆ, ಅಯ್ಯಪ್ಪಸ್ವಾಮಿಯ ದರ್ಶನಕ್ಕೆ 10-50 ವರ್ಷದ ಮಹಿಳೆಯರು ಹೋಗದಿರುವುದು ಸಹ ಸಂವಿಧಾನದ ಉಲ್ಲಂಘನೆಯಲ್ಲ. ನೇರವಾಗಿ ಅರ್ಥೈಸಿಕೊಳ್ಳಲು ಇದು ಕಷ್ಟದಾಯಕವಾದರೂ, ಇದರ ಒಳ ಅರ್ಧ ಒಂದೇ ಕೇವಲ ಒಂದು ದೇವಾಲಯಕ್ಕೆ ಪ್ರವೇಶ ನಿಷೇಧವಿರುವುದು ಖಂಡಿತವಾಗಿಯೂ ಸ್ತ್ರೀ ಸಮಾನತೆಗೆ ಘಾಸಿ ಉಂಟುಮಾಡುವುದಿಲ್ಲ.

4) ಧರ್ಮದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಸಮಾಜದಲ್ಲಿ ಘರ್ಷಣೆ, ಕೋಲಾಹಲ ಉಂಟಾಗುತ್ತಿರುವದು ಸರಿಯಲ್ಲ. ಸಮಾಜದಲ್ಲಿ ಶಾಂತಿ ನೆಲೆಸಿರುವಂತಹ ಸಂದರ್ಭದಲ್ಲಿ ಇಂತಹದೊಂದು ತೀರ್ಪಿನಿಂದ ದೇಶದ ಬಹುತೇಕ ನಾಗರಿಕರಲ್ಲಿ ಧರ್ಮದ ವಿಚಾರದಲ್ಲಿ ಅಸಮಾಧಾನ ಆಗಿರುವದನ್ನು ಪರಿಗಣಿಸಬೇಕಿದೆ. ಮೂಲಭೂತ ಹಕ್ಕುಗಳ ರಕ್ಷಕ ಎಂದೇ ಕರಿಯಲ್ಪಡುವ ನ್ಯಾಯಾಂಗ ಹಾಗೂ ನ್ಯಾಯಾಲಯಗಳು ಸಮಾಜದಲ್ಲಿ ಶಾಂತಿ ಕಾಪಾಡುವ ಕರ್ತವ್ಯವನ್ನು ಹೊಂದಿರುತ್ತವೆ ಹಾಗೂ ಇದುವೇ ನ್ಯಾಯಾಲಯಗಳ ಆದ್ಯ ಕರ್ತವ್ಯ ಕೂಡ.

5) ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವರು ಬ್ರಹ್ಮಚಾರಿಯಾಗಿರುತ್ತಾನೆ. ಹಾಗಾಗಿ ಪ್ರಾಯದ ಸ್ತ್ರೀಯರು ದೇವರ ದರ್ಶನ ಮಾಡಬಾರದು ಎಂಬದು ಧಾರ್ಮಿಕ ನಂಬಿಕೆ. ಈ ನಂಬಿಕೆಗೆ ವಿರುದ್ಧವಾದ ತೀರ್ಪು ಧರ್ಮಕ್ಕೆ ಖಂಡಿತ ಧಕ್ಕೆ ಉಂಟುಮಾಡುತ್ತದೆ.

ಒಂದು ಕಲ್ಲಿನ ವಿಗ್ರಹಕ್ಕೆ ನಮ್ಮ ಭಕ್ತಿಯೇ ಶಕ್ತಿ ತುಂಬುವಂತದ್ದು.ನಮ್ಮ ಭಕ್ತಿ ಎಂಬ ಭಾವನಂಬಿಕೆಗಳಿಂದ ಅರಳುತ್ತದೆ. ಹಾಗಾಗಿ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವಂತಹ ಯಾವುದೇ ತೀರ್ಪು ಮೂಲಭೂತ ಹಕ್ಕುಗಳನ್ನು ಪ್ರಶ್ನಿಸುತ್ತದೆ ಎಂದರೆ ತಪ್ಪಾಗುವುದಿಲ್ಲ. ಮಹಿಳೆಯರ ಪ್ರವೇಶ ಈ ಒಂದು ದೇವಾಲಯದಿಂದ ನಿಷೇಧಿಸಿರುವುದರ ಮಾತ್ರಕ್ಕೆ ಮಹಿಳೆಯರು ಎರಡನೆಯದರ್ಜೆ ಪ್ರಜೆಗಳಾಗುವುದಿಲ್ಲ. ಉದ್ಯೋಗ ಅವಕಾಶ, ಸಮಾಜದಲ್ಲಿ ಸಮಾನತೆ, ನೋಡುವ ದೃಷ್ಟಿಕೋನದಲ್ಲಿ ಮಹಿಳೆಯರಿಗೆ ಗೌರವ, ಸಮಾನತೆ ಬೇಕೆ ವಿನಹ: ಬಹುಮತ ಜನರ ನಂಬಿಕೆಯನ್ನು ಘಾಸಿಗೊಳಿಸಿ ಅಲ್ಲ.

6) ತಲಾಖ್, ಸತೀ ಪದ್ಧತಿ, ಬಾಲ್ಯವಿವಾಹ ರದ್ದು, ಈ ಕಾಯ್ದೆಗಳು ಮಹಿಳಾ ಸಬಲೀಕರಣಕ್ಕೆ ಪುಷ್ಟಿ ನೀಡಿದ ಕೆಲವು ತೀರ್ಪುಗಳು. ಏಕೆಂದರೆ ಈ ಪದ್ಧತಿಗಳಿಂದ ಹಲವಾರು ಮಹಿಳೆಯರು ಬಳಲುತ್ತಿದ್ದರು, ನರಳುತ್ತಿದ್ದರು. ಆದರೆ ಒಂದು ದೇವಾಲಯಕ್ಕೆ ಹೋಗದೆ ಇರುವುದರಿಂದ ಮಹಿಳೆಯರಿಗೆ ಯಾವುದೇ ರೀತಿಯಾದಂತಹ ತೊಂದರೆಯಾಗಲೀ, ನೋವಾಗಲೀ ಇಲ್ಲ.

7) ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ಬಹಳಷ್ಟು ಮಂದಿ ಹಿಂದೂ ಧರ್ಮದವರಿಗೆ ಅದರಲ್ಲೂ ಅಯ್ಯಪ್ಪ ಸ್ವಾಮಿ ಭಕ್ತರಿಗೆ ನಮ್ಮ ಸುಪ್ರೀಂ ಕೋರ್ಟ್‍ನ ಈ ನಿರ್ಧಾರ ಅಸಮಾಧಾನ ನೀಡಿದೆ. ಈ ನಿರ್ಧಾರವನ್ನು ಮುಸ್ಲಿಂ ಜನಾಂಗದವರೂ ಸಹ ಸ್ವೀಕರಿಸಲಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಒಂದು ಮಸೀದಿಗಳಲ್ಲಿ ಸಹ ಪುರುಷರು ಮಾತ್ರ ಪ್ರವೇಶಿಸಿ, ಪ್ರಾರ್ಥಿಸುತ್ತಾರೆ. ಶುಕ್ರವಾರದ ವಿಶೇಷ ನಮಾಜ್‍ಗೆ ಹೆಣ್ಣುಮಕ್ಕಳಿಗೆ ಅನುಮತಿ ಇಲ್ಲ. ಇನ್ನು ಶಬರಿಮಲೆಗೆ ಆದ ಗತಿಯೇ ನಾಳೆ ಮಸೀದಿಗಳಿಗೆ ಬರಬಹುದು ಎಂಬುವ ಭಯ ಒಂದು ಕಡೆಯಾದರೆ; ಯಾವುದೋ ಬಿಕಿನಿ ರೂಪದರ್ಶಿ ಪಬ್ಲಿಸಿಟಿ ಪಡೆಯುವ ಸಲುವಾಗಿ ಕೇವಲ ತನ್ನ ಹೆಸರಿಗೆ ಅಷ್ಟೆ ಅಲ್ಲದೇ ಇಡಿಯ ಇಸ್ಲಾಂ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಿದರು. ಇದರಿಂದ ನೊಂದ ಇಸ್ಲಾಂ ಸಮುದಾಯದವರು ಆಕೆಯನ್ನು ಇಸ್ಲಾಂ ಜಾತಿಯಿಂದಲೇ ಉಚ್ಛಾಟನೆ ಮಾಡಿದರು. ಆದರೆ ಈ ಎಲ್ಲಾ ಗೊಂದಲಗಳಿಗೆ ಕಾರಣ ಒಂದು ತೀರ್ಪು.

ಮೊದಲೇ ತಿಳಿಸಿದಂತೆ; ಸರ್ವೋಚ್ಛ ನ್ಯಾಯಾಲಯದ ಘನತೆಗೆ ಯಾವುದೇ ರೀತಿಯಲ್ಲಿ ಅಗೌರವ ನೀಡುವ ಉದ್ದೇಶ ಈ ಲೇಖನಕ್ಕಿಲ್ಲ. ಆದರೆ ನಮ್ಮ ಭಾರತ ಸಂವಿಧಾನವು ಅನುಚ್ಛೇದ 19ರ ಅಡಿಯಲ್ಲಿ ರೈಟ್ ಟು ಎಕ್ಸ್‍ಪ್ರಸ್ (ಖIಉಊಖಿ ಖಿಔ ಇಘಿPಖಇSS ಔಓಇ’S ಗಿIಇWS &amdiv; ಔPIಓIಔಓS ಖಿಊಖಔUಉಊ ಂಓಙ ಒಇಆIUಒ) ಗೆ ಅನುವು ಮಾಡಿಕೊಟ್ಟಿರುವ ಕಾರಣ; ನನ್ನ ಅನಿಸಿಕೆಯನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ. ಶಬರಿಮಲೆಯನ್ನು ಏರುವ ಮುನ್ನ ಶಬರಿಯ ತಾಳ್ಮೆಯನ್ನು ಪ್ರತಿಯೊಂದು ಹೆಣ್ಣುಮಗು ರೂಢಿಸಿಕೊಳ್ಳಲಿ ಎಂಬುದೇ ನನ್ನ ಆಶಯ. - ಸಿಂಧೂರ ಎನ್. ಸ್ವಾಮಿ, ವಕೀಲರು, ವೀರಾಜಪೇಟೆ.