ಸುಂಟಿಕೊಪ್ಪ, ನ.4: ರಾಜ್ಯ ಸರಕಾರ ಆದೇಶದ ಮೇರೆ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ನಿಯೋಜಿತ ಸ್ಥಳದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರಚೋದನಕಾರಿ ವಿಚಾರ, ಗುಂಪು ಸೇರುವದು ಗೊಂದಲ ಸೃಷ್ಟಿಗೊಳಿಸುವವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವದೆಂದು ಕುಶಾಲನಗರ ವೃತ್ತನಿರೀಕ್ಷಕ ಕ್ಯಾತೇಗೌಡ ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆಸಲಾದ ಟಿಪ್ಪು ಜಯಂತಿ ಸಂಬಂಧ ಸರ್ವಧರ್ಮಿಯರ ಮುಖಂಡರ ¸ಮ್ಮುಖದಲ್ಲಿ ನಡೆಸಲಾದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ವರ್ಗದ ಜನತೆಯು ಶಾಂತಿ ಸೌಹಾರ್ಧತೆಯಿಂದ ಒಗ್ಗೂಡಿ ಸಾಗುತ್ತಿದೆ. ಅದೇ ರೀತಿ ಟಿಪ್ಪು ಜಯಂತಿಯು ಸರಕಾರದ ಮಟ್ಟದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಕೇಂದ್ರ ಸೂಚಿತ ಸ್ಥಳಗಳಲ್ಲಿ ನಡೆಸಲಾಗುವದು ಎಂದರು. ಇಲಾಖೆ ಹೊರತುಪಡಿಸಿ ಇನ್ನಿತರ ಸ್ಥಳಗಳಲ್ಲಿ ಸಮಾರಂಭವನ್ನು ಆಯೋಜಿಸುವಂತಿಲ್ಲ ಎಂದರಲ್ಲದೆ ನಿಷೇಧಾಜ್ಞೆಯು ಜಾರಿಯಲ್ಲಿರುತ್ತದೆ ಅನಗತ್ಯ ಗೊಂದಲ ಸೃಷ್ಟಿಸುವದು, ಗುಂಪು ಸೇರುವದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಮುಖಂಡರು ಹಾಗೂ ನಾಯಕರು ಇದರ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ಯಾವದೇ ಗೊಂದಲ ನಿರ್ಮಿಸುವ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವದು ಎಂದು ಕ್ಯಾತೇಗೌಡ ಹೇಳಿದರು.

ಈ ಸಂದರ್ಭ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ, ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯ ರಜಾಕ್, 7ನೇ ಹೊಸಕೋಟೆ ಪಂಚಾಯಿತಿ ಸದಸ್ಯ ರಮೇಶ್, ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ನಾಗೇಶ್ ಪೂಜಾರಿ, ಅಶೋಕ್, ವಕೀಲ ದೀಪಕ್, ಅಣ್ಣಾ ಶರೀಫ್ ಹಾಗೂ ಧಾರ್ಮಿಕ ಮುಖಂಡರು ಮತ್ತಿತರರು ಇದ್ದರು. ಎ.ಎಸ್‍ಐ ಶಿವಪ್ಪ ಸ್ವಾಗತಿಸಿ ವಂದಿಸಿದರು.