ಚೆಟ್ಟಳ್ಳಿ, ನ. 4: ಲಕ್ಕಿ ಬಾಯ್ಸ್ ಕುಂಜಿಲ ಇವರ ವತಿಯಿಂದ ನಾಪೋಕ್ಲು ಸಮೀಪದ ಕಕ್ಕಬ್ಬೆ ಪ್ರೌಢ ಶಾಲಾ ಮೈದಾನದಲ್ಲಿ ನಡೆದ 7+2 ಜನರ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಮಾತೃಭೂಮಿ ಮರಗೋಡು ಪ್ರಥಮ ಹಾಗೂ ಕೆ.ವೈ.ಸಿ ಕೊಂಡಂಗೇರಿ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪಂದ್ಯಾವಳಿಯಲ್ಲಿ 25 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೊದಲನೇ ಸೆಮಿಫೈನಲ್ ಪಂದ್ಯವು ಮರಗೋಡು ಹಾಗೂ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು. ಮಾತೃ ಭೂಮಿ ಮರಗೋಡು ತಂಡವು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಕೊಂಡಂಗೇರಿ ತಂಡವು ಲಕ್ಕಿ ಬಾಯ್ಸ್ ಕುಂಜಿಲ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಪಂದ್ಯಾಟದ ಉತ್ತಮ ಗೋಲು ಕೀಪರ್ ಕೆ.ವೈ.ಸಿ ಕೊಂಡಂಗೇರಿ ತಂಡದ ಅಸ್ಕರ್, ಉತ್ತಮ ಆಟಗಾರ ಕೊಂಡಂಗೇರಿ ತಂಡದ ಅಜಿತ್ ಹಾಗೂ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಮರಗೋಡು ತಂಡದ ಪ್ರಥಮ್ ಪಡೆದುಕೊಂಡರು. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕುಂಜಿಲ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮುಸ್ತಫಾ, ಜಾಫರ್ ಷರೀಫ್, ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಸಂಸ್ಥಾಪಕ ಆಸೀಫ್, ಕೊಂಡಂಗೇರಿ ಯೂತ್ ಕ್ಲಬ್ ಅಧ್ಯಕ್ಷ ತಯೂಬ್ ಇದ್ದರು.