ಸೋಮವಾರಪೇಟೆ,ನ.4: ಮೈತ್ರಿಕೂಟದ ಅಭ್ಯರ್ಥಿಗಳು ಏಳು ಸ್ಥಾನದಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಇದೀಗ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭಗೊಂಡಿದೆ.

ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಹಿನ್ನೆಲೆ ಎರಡೂ ರಾಜಕೀಯ ಪಕ್ಷಗಳ ಮುಖಂಡರು ಮಾತುಕತೆ ನಡೆಸುತ್ತಿದ್ದು, ಇನ್ನೆರಡು ದಿನದಲ್ಲಿ ಪೂರ್ಣ ಚಿತ್ರಣ ಲಭ್ಯವಾಗಲಿದೆ.

ತಾಲೂಕಿನ ಕುಶಾಲನಗರದ ಪಟ್ಟಣ ಪಂಚಾಯಿತಿ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮೈತ್ರಿ ಪಕ್ಷಗಳು ಅಧಿಕಾರ ಹಿಡಿಯುವ ಬಗ್ಗೆ ಈಗಾಗಲೇ ಚಿತ್ರಣ ಲಭ್ಯವಾಗಿದ್ದು, ಕುಶಾಲನಗರದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟರೆ, ಸೋಮವಾರಪೇಟೆಯಲ್ಲಿ ಜೆಡಿಎಸ್‍ನವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಬಗ್ಗೆಯೂ ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ನೀಡಿದರೆ, ಕುಶಾಲನಗರದಲ್ಲಿ ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ.

ಸೋಮವಾರಪೇಟೆ ಪ.ಪಂ. ಅಧ್ಯಕ್ಷ ಸ್ಥಾನ ಅಲಂಕರಿಸಲು ಹಿರಿಯ ಸದಸ್ಯ ಸಂಜೀವ, ಬಿ.ಸಿ. ವೆಂಕಟೇಶ್ ಮತ್ತು ಉದಯಶಂಕರ್ ಅವರುಗಳ ನಡುವೆ ಪೈಪೋಟಿ ನಡೆಯುತ್ತಿರುವದು ಸದ್ಯದ ವಿದ್ಯಮಾನವಾಗಿದೆ.

1996ರಿಂದ 4 ಚುನಾವಣೆ ಎದುರಿಸಿ ಮೂರು ಚುನಾವಣೆಯಲ್ಲಿ ಗೆಲುವು ಕಂಡಿರುವ ಸಂಜೀವ ಅವರು ಈ ಬಾರಿ ತಮಗೆ ಅಧ್ಯಕ್ಷ ಸ್ಥಾನ ನೀಡಿದರೆ ಸಮರ್ಪಕವಾಗಿ ನಿಭಾಯಿಸುತ್ತೇನೆ ಎಂದು ಈಗಾಗಲೇ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದು, ಮೈತ್ರಿ ಪಕ್ಷವಾದ ಜೆಡಿಎಸ್‍ನ ಹಿರಿಯ ಮುಖಂಡ ಜೀವಿಜಯ ಅವರೊಂದಿಗೂ ಬೇಡಿಕೆ ಮುಂದಿಟ್ಟಿದ್ದಾರೆ.

1996ರಲ್ಲಿ ಬಿಜೆಪಿಯ ಬಿ.ಡಿ. ಮಂಜುನಾಥ್ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಂಚಾಯಿತಿ ಪ್ರವೇಶಿಸಿದ್ದ ಸಂಜೀವ ಅವರು, ತದನಂತರ 2001ರಲ್ಲಿ ಜೀವಿಜಯ ಶಾಸಕರಾಗಿದ್ದ ಸಂದರ್ಭವೂ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. ಜೀವಿಜಯ ಅವರ ಬೆಂಬಲಿಗರಾಗಿರುವ ಸಂಜೀವ, ಈ ಬಾರಿ ಜೆಡಿಎಸ್‍ನಿಂದ ಟಿಕೇಟ್ ಬಯಸಿದ್ದರು. ಅಷ್ಟರಲ್ಲಾಗಲೇ ಐವರು ಅಭ್ಯರ್ಥಿಗಳಿಗೆ ಬಿ.ಫಾರಂ ನೀಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಮಾಜೀ ಅಧ್ಯಕ್ಷ ಮೂರ್ತಿ ವಿರುದ್ಧ ಜಯಗಳಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ. ಮುಖಂಡರು ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ ಎಂದು ಸಂಜೀವ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಇವರೊಂದಿಗೆ ಕಳೆದ ಅವಧಿಯಲ್ಲೂ ಚುನಾಯಿತರಾಗಿದ್ದ ಬಿ.ಸಿ. ವೆಂಕಟೇಶ್ ಸಹ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಎರಡೂ ಪಕ್ಷಗಳ ಮುಖಂಡರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದರೆ ಜವಾಬ್ದಾರಿ ನಿಭಾಯಿಸುತ್ತೇನೆ. ಅಧ್ಯಕ್ಷ ಸ್ಥಾನ ಬೇರೆಯವರಿಗೆ ನೀಡಿದರೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಅವಧಿಯಲ್ಲಿ ನಾಮನಿರ್ದೇಶನಗೊಂಡಿದ್ದ ಉದಯಶಂಕರ್ ಅವರು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪಟ್ಟುಹಿಡಿದಿದ್ದು, ಮುಖಂಡರೆದುರು ತಮ್ಮ ಬೇಡಿಕೆ ಮುಂದಿರಿಸಿದ್ದಾರೆ.

ಕಳೆದ 32 ವರ್ಷಗಳಿಂದ ಕಾಂಗ್ರೆಸ್‍ಗಾಗಿ ದುಡಿದಿದ್ದು, ಜೀವಿಜಯ ಅವರು ಚುನಾವಣೆಗೆ ನಿಂತ ಸಂದರ್ಭವೂ ಕೆಲಸ ಮಾಡಿದ್ದೇನೆ. ತನಗೆ ಸ್ಥಾನ ನೀಡುವ ಬಗ್ಗೆ ಭರವಸೆ ಇದೆ. ಇದುವರೆಗೂ ಕಾಂಗ್ರೆಸ್‍ನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಒಂದು ವೇಳೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ಯೋಚಿಸಬೇಕಾಗುತ್ತದೆ ಎಂದು ತಮ್ಮ ನಿಲುವನ್ನು ಗುಪ್ತವಾಗಿಟ್ಟಿದ್ದು, ಕನಿಷ್ಟ 1 ವರ್ಷವಾದರೂ ತನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಕಾಂಗ್ರೆಸ್ ಮುಖಂಡರ ಭೇಟಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಮಾತುಕತೆ ನಡೆಸುತ್ತಿದ್ದು, ಇನ್ನೆರಡು ದಿನದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಇಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತು ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್ ಅವರುಗಳು, ಜೀವಿಜಯ ಅವರನ್ನು ಮನೆಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಚರ್ಚಿಸಿ ತೀರ್ಮಾನ-ಜೀವಿಜಯ: ಅಧ್ಯಕ್ಷರ ಆಯ್ಕೆ ಸಂಬಂಧ ‘ಶಕ್ತಿ’ಯೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಜೀವಿಜಯ, ಈ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಯಾವ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಗ್ಗೆ ಇದುವರೆಗೂ ತೀರ್ಮಾನಿಸಿಲ್ಲ. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ರಾಜ್ಯದ ಮೈತ್ರಿ ಸರ್ಕಾರದಂತೆ ತಾಲೂಕಿನ ಎರಡೂ ಪ.ಪಂ.ಗಳಲ್ಲಿ ಹೊಂದಾಣಿಕೆಯಿಂದ ಅಧಿಕಾರ ನಡೆಸುತ್ತೇವೆ ಎಂದರು.

ಗೆದ್ದ ಅಭ್ಯರ್ಥಿಗಳ ಸಭೆ: ಮೈತ್ರಿಕೂಟದಿಂದ ಗೆಲುವು ಸಾಧಿಸಿದ 7 ಮಂದಿ ಅಭ್ಯರ್ಥಿಗಳ ಸಭೆ ನಡೆಸಿ ಅಧ್ಯಕ್ಷರನ್ನು ಅಂತಿಮಗೊಳಿಸುತ್ತೇವೆ. ಉಪಾಧ್ಯಕ್ಷ, ಸ್ಥಾಯಿ ಸಮಿತಿಗಳಿಗೂ ಆಯ್ಕೆ ನಡೆಯಬೇಕಿದ್ದು, ಇರುವ 5 ವರ್ಷದ ಅವಧಿಯಲ್ಲಿ, 7 ಸದಸ್ಯರ ಪೈಕಿ ಕನಿಷ್ಟ 6 ಮಂದಿ ಅಧಿಕಾರ ಪಡೆಯಬಹುದಾಗಿದೆ. ಜೀವಿಜಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್ ಹೇಳಿದ್ದಾರೆ.

ಚುನಾವಣೆಯಲ್ಲಿ ನಮ್ಮ ಪಕ್ಷ 4 ಸ್ಥಾನಗಳನ್ನು ಗಳಿಸುವ ಮೂಲಕ ದೊಡ್ಡ ಪಕ್ಷವಾಗಿದ್ದು, ನಮಗೇ ಅಧ್ಯಕ್ಷ ಸ್ಥಾನ ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದರೆ, ಕುಶಾಲನಗರದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ನೀಡಿದರೆ ಇಲ್ಲಿ ಅನಿವಾರ್ಯವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಹಾಗಾದಾಗ ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ನಾಗರತ್ನ ಮತ್ತು ಜೀವನ್‍ಗೆ ಅವಕಾಶ ಒದಗಲಿದ್ದು, ಹಿರಿಯ ಸದಸ್ಯೆ ಜಯಂತಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಬಹುದು. - ವಿಜಯ್ ಹಾನಗಲ್