ಮಡಿಕೇರಿ, ನ. 7: ಕೊಡಗಿನ ಜನರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತ್ತೆ ಟಿಪ್ಪು ಜಯಂತಿ ಆಚರಣೆಯನ್ನು ಬಲವಂತ ವಾಗಿ ಹೇರಲು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಇನ್ನಾದರು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತು ಕೊಂಡು ಜಿಲ್ಲೆಯಲ್ಲಿ ಜಯಂತಿಯನ್ನು ರದ್ದು ಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.ನಗರದಲ್ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಿಸುವಂತೆ ಯಾವದೇ ಮುಸಲ್ಮಾನರು ಬೇಡಿಕೆ ಇಟ್ಟಿಲ್ಲ. ಅಲ್ಲದೆ, ಸುಮಾರು 50 ವರ್ಷಗಳ ಕಾಲ ರಾಜ್ಯವನ್ನು ಆಳಿದ ಕಾಂಗ್ರೆಸ್ಸಿಗೂ ಅದರ ನೆನಪು ಬಂದಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಸಂದರ್ಭ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಓಟ್ ಬ್ಯಾಂಕ್ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬಾರ ದೆಂದು ಮತ್ತೊಮ್ಮೆ ಮುಖ್ಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತೇವೆ. ಇದನ್ನೂ ಮೀರಿ ಜಯಂತಿ ಆಚರಿಸಲು ಮುಂದಾದರೆ ಪ್ರತಿಭಟನೆಯ ಮೂಲಕ ತಡೆಯೊಡ್ಡುವದಾಗಿ ಎಚ್ಚರಿಕೆ ನೀಡಿದರು. ಕೊಡಗಿಗೆ 31 ಬಾರಿ ಧಾಳಿ ನಡೆಸಿದ ಟಿಪ್ಪು ಹೀನಾಯ ವಾಗಿ ಸೋಲು ಕಂಡಿದ್ದು, 32ನೇ ಬಾರಿಗೆ ಕುತಂತ್ರದಿಂದ ಕೊಡವರನ್ನು ಹತ್ಯೆಗೈಯುವ ಮೂಲಕ ಜಯ ಗಳಿಸಿದ್ದಾನೆ ಎಂದು ಅಪ್ಪಚ್ಚುರಂಜನ್ ಆಕ್ರೋಶ ವ್ಯಕ್ತಪಡಿಸಿದರು. ಮತಾಂಧ ವ್ಯಕ್ತಿಯ ಜನ್ಮ ದಿನಾಚರಣೆಯನ್ನು ಆಚರಿಸುವದು ಕೊಡಗಿನ ಜನತೆಗೆ ಸರ್ಕಾರ ಮಾಡುವ ಅಪಮಾನ ವಾಗಿದ್ದು, ಯಾವದೇ ಕಾರಣಕ್ಕೂ ಈ ಜನ್ಮ
(ಮೊದಲ ಪುಟದಿಂದ) ದಿನಾಚರಣೆ ನಡೆಯಲು ಬಿಡುವದಿಲ್ಲವೆಂದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ದೇವಾಲಯಗಳÀನ್ನು ಧ್ವಂಸ ಗೊಳಿಸಿದ್ದಲ್ಲದೆ ಮಂಗಳೂರಿನಲ್ಲಿ ಕ್ರೈಸ್ತರನ್ನು ಮತಾಂತರಗೊಳಿಸಿದ್ದಾನೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭ ನಡೆದ ಘರ್ಷಣೆಯಲ್ಲಿ ಕುಟ್ಟಪ್ಪ ಅವರು ಸಾವಿಗೀಡಾಗಿದ್ದು, ಈ ಸಂದರ್ಭ ಕುಟ್ಟಪ್ಪ ಅವರ ಮನೆಗೆ ಭೇಟಿ ನೀಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು, ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರಲ್ಲದೆ, ತÀಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇದನ್ನು ರದ್ದು ಪಡಿಸುವದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಕುಮಾರಸ್ವಾಮಿ ಅವರೇ ಮತ್ತೊಮ್ಮೆ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾ. 10 ರಂದು ಟಿಪ್ಪು ಜಯಂತಿಯನ್ನು ವಿರೋಧಿಸಿ ಸ್ವಯಂ ಪ್ರೇರಿತರಾಗಿ ಯಾರಾದರು ಬಂದ್ ಆಚರಿಸಿದರೆ ಅದÀಕ್ಕೆ ನಮ್ಮ ಬೆಂಬಲವಿದೆ ಎಂದು ಸುನಿಲ್ ಸುಬ್ರಮಣಿ ಸ್ಪಷ್ಟಪಡಿಸಿದರು. ನಾವು ಮುಸ್ಲಿಂ ವಿರೋಧಿಗಳಲ್ಲ, ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ್ ಸೇರಿದಂತೆ ಯಾವದೇ ಒಬ್ಬ ಉತ್ತಮ ಮುಸಲ್ಮಾನನ ಜನ್ಮದಿನವನ್ನು ಆಚರಿಸುವದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು. ಆದರೆ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮತಾಂಧ ಟಿಪ್ಪುವಿನ ಜನ್ಮ ದಿನ ಆಚರಿಸುವದನ್ನು ನಾವು ವಿರೋಧಿಸುತ್ತೇವೆ ಎಂದರು.
ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದಾಗಿ ಎಲ್ಲಾ ಹಬ್ಬ ಹರಿದಿನಗಳು, ಉತ್ಸವಗಳನ್ನು ಜನರು ರದ್ದುಪಡಿಸಿದ್ದಾರೆ. ಕೊಡವರ ಹಾಕಿ, ಗೌಡ ಸಮೂಹದ ಕ್ರಿಕೆಟ್ ಸೇರಿದಂತೆ ಕ್ರೀಡೋತ್ಸವಗಳನ್ನು ಮುಂದೂಡಲಾಗಿದೆ. ಆದರೂ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದು ಖಂಡನೀಯ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ರಾಜ್ಯ ಸರ್ಕಾರ ಅತಿವೃಷ್ಟಿ ಹಾನಿಯ ಕೊಡಗಿನ ಜನರ ಕಣ್ಣೀರಿಗೆ, ನೋವಿಗೆ ಸ್ಪಂದಿಸುವ ಬದಲು ಮತಾಂಧ ಹಾಗೂ ಕನ್ನಡ ವಿರೋಧಿ ಟಿಪ್ಪುವಿನ ಜಯಂತಿಯನ್ನು ಆಚರಿಸಲು ಮುಂದಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿ ಕುಶಾಲಪ್ಪÀ ಮಾತನಾಡಿ, ಟಿಪ್ಪು ಜಯಂತಿ ಆಚರಿಸುವದಿಲ್ಲವೆಂದು ಹೇಳಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಇದೀಗ ವಚನ ಭ್ರಷ್ಟರಾಗಿದ್ದಾರೆ ಎಂದು ಟೀಕಿಸಿದರು. ಸರ್ಕಾರ ಕಾನೂನು ಮೀರಿ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದಲ್ಲಿ ಮುಂದಾಗುವ ಅನಾಹುತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರ್ಕಾರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಂ ಬಾಂಧವರ ವಿರೋಧವಿದೆ: ಮತ್ತೋರ್ವ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ಸೋಮವಾರಪೇಟೆಯಲ್ಲಿ ತಹಶೀಲ್ದಾರರು ಕರೆದಿದ್ದ ಸಭೆಯಲ್ಲಿ ಮುಸಲ್ಮಾನ ಬಾಂಧವರೇ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಕೂಡ ಓರ್ವ ವ್ಯಕ್ತಿಯನ್ನು ಹೊರತು ಪಡಿಸಿ ಉಳಿದ ಮುಸ್ಲಿಂ ಬಾಂಧವರು ಟಿಪ್ಪು ಜಯಂತಿ ಆಚರಣೆ ಕೈಬಿಡುವಂತೆ ಸಲಹೆ ಮಾಡಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿ ಸರ್ಕಾರದ ಆಜ್ಞೆಯಂತೆ ಜಿಲ್ಲಾಡಳಿತದಿಂದ ಟಿಪ್ಪು ಜಯಂತಿಯನ್ನು ಆಚರಿಸುವದಾಗಿ ಘೋಷಿಸಿದ್ದಾರೆ. ಕೊಡಗಿನ ಜನತೆಗೆ ಬೇಡವಾಗಿರುವ ಟಿಪ್ಪು ಜಯಂತಿಯನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗಳು ಈಗಲಾದರು ಸರಕಾರಕ್ಕೆ ಪತ್ರ ಬರೆಯಬೇಕು ಮತ್ತು ಸಭೆಯಲ್ಲಿ ಮುಸಲ್ಮಾನರೇ ಜಯಂತಿಗೆ ವಿರೋಧ ವ್ಯಕ್ತಪಡಿಸಿರುವ ಕುರಿತಾದ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕೆಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಮಹಾತ್ಮಾ ಗಾಂಧೀಜಿ, ಬಸವಣ್ಣ, ವಾಲ್ಮೀಕಿ ಮೊದಲಾದ ಮಹಾತ್ಮರ ಜಯಂತಿಯ ಸಾಲಿನಲ್ಲಿ ಮತಾಂಧ ಟಿಪ್ಪುವಿನ ಜಯಂತಿಯನ್ನು ಸೇರಿಸುವ ಮೂಲಕ ಉಳಿದ ಮಹಾತ್ಮರಿಗೆ ಅಪಮಾನ ಮಾಡಿ ದಂತಾಗಿದೆ ಎಂದು ಆರೋಪಿಸಿದರು.