ಮಡಿಕೇರಿ, ನ. 7: ತಾ. 10 ರಂದು ಸರಕಾರದ ಆದೇಶದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆಗಳಲ್ಲಿ ಆಚರಿಸಲ್ಪಡುವ ಟಿಪ್ಪು ಜಯಂತಿ ಹಿನ್ನೆಲೆ, ಕೊಡಗಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜನತೆ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕರೆ ನೀಡಿದರು. ಇಂದು ತುರ್ತಾಗಿ ಜಿಲ್ಲಾ ಆಡಳಿತ ಭವನಕ್ಕೆ ಆಗಮಿಸಿದ ಸಚಿವರು, ಈ ಸಂಬಂಧ ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಶರಶ್ಚಂದ್ರ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳೊಂದಿಗೆ ಸುದೀರ್ಘ ಚರ್ಚೆ ಬಳಿಕ

(ಮೊದಲ ಪುಟದಿಂದ) ಮಾದ್ಯಮ ದೊಂದಿಗೆ ಮಾತನಾಡಿದರು. ಈ ಹಿಂದೆ ಕೊಡಗಿನಲ್ಲಿ ನೈಸರ್ಗಿಕವಾಗಿ ಪ್ರಾಕೃತಿಕ ಅನಾಹುತ ಸಂಭವಿಸಿದ ವೇಳೆ ಮಾನವೀಯತೆ ತೋರಿರುವ ಕೊಡಗಿನ ಜನತೆ, ತಾ. 10 ರಂದು ಯಾವದೇ ಅಹಿತಕರ ಘಟನೆಗೆ ಅವಕಾಶ ವಾಗದಂತೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಕರೆ ನೀಡಿದ ಸಚಿವರು, ಎಲ್ಲಾ ವರ್ಗದ ಸಂಘಟನೆಗಳು ಕೂಡ ಯಾರಿಗೂ ನೋವಾಗದಂತೆ ನಡೆದುಕೊಳ್ಳ ಬೇಕೆಂದು ಸಲಹೆ ನೀಡಿದರು.

ನಿರ್ದಾಕ್ಷಿಣ್ಯ ಕ್ರಮ : ಯಾರೇ ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಅಶಾಂತಿಗೆ ಯತ್ನಿಸಿದರೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮಕ್ಕೆ ಸೂಚಿಸಿರುವದಾಗಿಯೂ ಸಚಿವರು ಸ್ಪಷ್ಟಪಡಿಸಿದರು.ಕಿಡಿಗೇಡಿಗಳಿಗೆ ಎಚ್ಚರಿಕೆ : ಕರ್ನಾಟಕ ದಕ್ಷಿಣ ವಲಯ ಐಜಿ ಶರಶ್ಚಂದ್ರ ಅವರು ಈ ವೇಳೆ ಪ್ರತಿಕ್ರಿಯಿಸಿ, ಸರಕಾರದಿಂದ ಆಯೋಜಿಸುವ ಟಿಪ್ಪು ಜಯಂತಿಗೆ ಅಡ್ಡಿಪಡಿಸದಂತೆ ಸೂಚ್ಯವಾಗಿ ಹೇಳಿದರು. ಯಾರೇ ಕಿಡಿಗೇಡಿಗಳು ಶಾಂತಿ ಭಂಗಗೊಳಿಸುವ ಯತ್ನಕ್ಕೆ ಮುಂದಾದರೂ ಕಠಿಣ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದರು.

ಸೂಕ್ತ ತಪಾಸಣೆ : ಯಾರೇ ದುಷ್ಕರ್ಮಿಗಳು ಶಾಂತಿ ಕದಡಲು ಯತ್ನಿಸದಂತೆ, ಕೊಡಗಿನ ಗಡಿ ಚೆಕ್‍ಪೋಸ್ಟ್‍ಗಳ ಸಹಿತ ಅಗತ್ಯವಿರುವ ಕಡೆಗಳಲ್ಲಿ ತಪಾಸಣೆ ನಡೆಸುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವದು ಎಂದರಲ್ಲದೆ, ಮೂರು ಕಡೆಗಳಲ್ಲಿ ಶಾಂತಿ ಕದಡದಂತೆ 1,500 ಪೊಲೀಸರನ್ನು ಅಲ್ಲಲ್ಲಿ ನಿಯೋಜಿಸ ಲಾಗುವದು ಎಂದು ಮಾಹಿತಿ ನೀಡಿದರು. ಕ್ಷಿಪ್ರ ಕಾರ್ಯಪಡೆ ನಿಯೋಜನೆ ಬಗ್ಗೆಯೂ ಸುಳಿವು ನೀಡಿದರು.

ಮಾಹಿತಿ ಪಡೆದ ಸಚಿವರು: ಟಿಪ್ಪು ಜಯಂತಿ ಕಾರ್ಯಕ್ರಮ ವನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವ ಸಾ.ರಾ.ಮಹೇಶ್ ಅವರು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಕೈಗೊಂಡಿರುವ ಬಂದೋಬಸ್ತ್ ಬಗ್ಗೆ ದಕ್ಷಿಣ ವಲಯ ಐಜಿಪಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ಪಡೆದರು.

ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾರ ಮನಸ್ಸಿಗೂ ನೋವು ಉಂಟಾಗಬಾರದು, ಆ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಟಿಪ್ಪು ಜಯಂತಿ ಆಚರಿಸುವಂತೆ ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಐಜಿಪಿ ಶರತ್‍ಚಂದ್ರ್ರ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇತರರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಸಾಕಷ್ಟು ವಿರೋಧವಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಯಂತಿ ನಡೆಯಲಿದೆ ಎಂದರು. ಈ ಹಿಂದೆ ಕುಮಾರಸ್ವಾಮಿ ತಾವು ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ನಿಷೇಧಿಸುವದಾಗಿ ನೀಡಿದ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವದು ಎಂದು ಸಚಿವರು ಪ್ರತಿಕ್ರಿಯಿಸಿದರು.