ಮಡಿಕೇರಿ, ನ. 7: ಅವರು ಹೊಟ್ಟೆಪಾಡಿಗಾಗಿ ದೂರದ ಊರಿಂದ ಬಂದಿದ್ದವರು.., ಮಣ್ಣಿನಲ್ಲೇ ದುಡಿದು ಸಂಪಾದಿಸಿ ಬದುಕು ಸಾಗಿಸುವವರು.., ಅಂತವರ ಜೀವಕ್ಕೆ ಮಣ್ಣೇ ಮುಳುವಾಯಿತು. ತಮ್ಮ ಕೆಲಸದಲ್ಲಿ ನಿರತರಾಗಿದ್ದ ಅವರುಗಳ ಮೇಲೆ ಕುಸಿದ ಮಣ್ಣು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿತು. ‘ದೇವರೇ ಅವರನ್ನು ರಕ್ಷಿಸಪ್ಪ’ ಎಂದು ಅಲ್ಲಿ ನೆರೆದಿದ್ದ ನೂರಾರು ಮಂದಿ ಮನದಲ್ಲೇ ಪಾರ್ಥಿಸಿದರೂ ಜವರಾಯನ ಮನ ಕರಗಲೇ ಇಲ್ಲ. ಬೆಳಕಿನ ಹಬ್ಬ ದೀಪಾವಳಿಯ ಮೊದಲ ದಿನವೇ ಸಂಭವಿಸಿದ ಈ ದುರಂತ ಬಾಳಿ ಬದುಕಬೇಕಿದ್ದ ಇಬ್ಬರೂ ಮಹಿಳೆಯರ ವನ್ನು ಕತ್ತಲಿಗೆ ದೂಡಿತು.ನಿನ್ನೆ ದಿನ ನಗರದ ರಾಜಾಸೀಟು ರಸ್ತೆಯ ಲಿವಾ ಕ್ಲೀನಿಕ್‍ನಿಂದ ಅಲ್ಪ ದೂರದಲ್ಲಿರುವ ಸುಬ್ಬಯ್ಯ ಎಂಬವರಿಗೆ ಸೇರಿದ ಕಟ್ಟಡಕ್ಕೆ ತಡೆಗೋಡೆ ನಿರ್ಮಾಣ ಕೆಲಸಕ್ಕಾಗಿ ಚಿಕ್ಕಮಗಳೂರು ಮೇದ್ರಹಳ್ಳಿಯ ಯಶೋಧ,
(ಮೊದಲ ಪುಟದಿಂದ) ಹಳೆಬೀಡು ಪೊನ್ನತ್‍ಪುರದ ಗೌರಮ್ಮ, ಮಚ್ಚಾಬೋವಿ ಹಾಗೂ ಪದ್ಮ ಎಂಬ ಕಾರ್ಮಿಕರು ಬಂದಿದ್ದರು. ತಡೆಗೋಡೆ ನಿರ್ಮಿಸಲು ಉದ್ದೇಶಿಸಿದ್ದ ಜಾಗದಲ್ಲಿ ಗುಂಡಿ ತೋಡುತ್ತಿದ್ದ ವೇಳೆ ಇದ್ದಕ್ಕಿದಂತೆ ಬರೆ ಕುಸಿತ ಉಂಟಾಗಿದೆ. ಪರಿಣಾಮ ನಾಲ್ವರು ಕಾರ್ಮಿಕರೂ ಕೂಡ ಮಣ್ಣಿನಡಿಗೆ ಸಿಲುಕಿದ್ದಾರೆ. ವಿಷಯವರಿತು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು, ಸಂಚಾರಿ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ, ಸಾರ್ವಜನಿಕರು ಹಾಗೂ ಕೆಲ ಆಟೋ ಚಾಲಕರುಗಳು ಬಂದು ಮಣ್ಣಿನಡಿ ಸಿಲುಕಿದವರನ್ನು ಮೇಲೆತ್ತಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಯಿಂದ ಮಚ್ಚಾಬೋವಿ ಹಾಗೂ ಪದ್ಮ ಇವರುಗಳನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಾಯಿತಾದರೂ ಗೌರಮ್ಮ (40) ಹಾಗೂ ಯಶೋಧ (20) ಇವರುಗಳು ಭೂ ಸಮಾಧಿಯಾದರು. ಪೊಲೀಸರಾದಿಯಾಗಿ ಸಾರ್ವಜನಿಕರು ಎಷ್ಟೇ ಪ್ರಯತ್ನ ಪಟ್ಟರೂ ಇಬ್ಬರು ಮಹಿಳಾ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರ ಸಹೋದ್ಯೋಗಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಸುಮಾರು 1 ಗಂಟೆಗೂ ಅಧಿಕ ಸಮಯ ನಡೆಸ ಕಾರ್ಯಾಚರಣೆಯನ್ನು ವೀಕ್ಷಿಸಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಒಂದು ಹಂತದಲ್ಲಿ ಜನಸಂದಣಿಯಿಂದ ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಭೇಟಿ ನೀಡಿದ್ದರು. ಕಟ್ಟಡ ಮಾಲೀಕ ಸುಬ್ಬಯ್ಯ ಹಾಗೂ ಗುತ್ತಿಗೆದಾರ ರವಿಚಂದ್ರ ಎಂಬವರುಗಳ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗು ಜಿಲ್ಲಾ ಬೋವಿ ಸಮಾಜ ಅಧ್ಯಕ್ಷ ಸುಜಿತ್ ನೇತೃತ್ವದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಶವಾಗಾರದ ಬಳಿ ಒತ್ತಾಯಿಸಿತು. ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಜವರೇಗೌಡ ಹಾಗೂ ತಹಶೀಲ್ದಾರ್ ಕುಸುಮ ಕಾನೂನಿನಡಿ ಕ್ರಮ ಕೈಗೊಳ್ಳುವಾಗಿ ಹೇಳಿದರು. ಕಟ್ಟಡ ಮಾಲೀಕ ಸುಬ್ಬಯ್ಯ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯಿತ್ತಿದ್ದಾರೆ.