ಶನಿವಾರಸಂತೆ, ನ. 9: ಗೋಣಿಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಅಂಕಣಕಾರ ಸಂತೋಷ್ ತಮ್ಮಯ್ಯ ಪ್ರವಾದಿ ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನಾಕಾರಿಯಾಗಿ ಬಿಂಬಿಸಿದ್ದು, ಪ್ರವಾದಿ ಮಹಮ್ಮದ್ ಅವರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕೊಡ್ಲಿಪೇಟೆಯ ಜಾಮಿಯಾ ಮಸೀದಿ ಮುಂಭಾಗ ಇಂದು ಜಾಮೀಯ ಮಸೀದಿ ಕೊಡ್ಲಿಪೇಟೆ, ಮಸ್ಜಿದುನ್ ನೂರ್, ಹ್ಯಾಂಡ್ ಪೋಸ್ಟ್ ಟಿಪ್ಪು ಯುವಕ ಸಂಘ ಕೊಡ್ಲಿಪೇಟೆ, ಹೆಚ್ಕೆಜಿಎನ್ ಕಮಿಟಿ ಕೊಡ್ಲಿಪೇಟೆ, ನೂರ್ ಯೂತ್ ಕಮಿಟಿ ಹ್ಯಾಂಡ್ ಪೋಸ್ಟ್ ವತಿಯಿಂದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಕೊಡ್ಲಿಪೇಟೆ ಟಿಪ್ಪು ಯುವಕ ಸಂಘದ ಅಧ್ಯಕ್ಷ ಔರಂಗಜೇಬ್, ಹ್ಯಾಂಡ್ಪೋಸ್ಟ್ ಮಸೀದಿ ಅಧ್ಯಕ್ಷ ಹನೀಫ್ ಅವರುಗಳು ಮಾತನಾಡಿ ಪತ್ರಿಕಾ ಅಂಕಣಕಾರ ಸಂತೋಷ್ ತಮ್ಮಯ್ಯ ಹಾಗೂ ವರದಿಯನ್ನು ಪ್ರಚೋದನಕಾರಿಯಾಗಿ ಪ್ರಕಟಿಸಿ ಇಸ್ಲಾಂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪತ್ರಿಕೆಯನ್ನು ರದ್ದುಗೊಳಿಸಬೇಕಾಗಿ ಹಾಗೂ ಇವರೊಂದಿಗೆ ಸಭೆಯಲ್ಲಿ ಮಾತನಾಡಿದ ರಾಬರ್ಟ್ ರೊಜಾರಿಯೋ ಹಾಗೂ ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ, ಬಾಚರಣಿಯಂಡ ಅಪ್ಪಣ್ಣ ಅವರುಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಂಡು ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ಶುಕ್ರವಾರ ಸೋಮವಾರಪೇಟೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಜಾಮಿಯಾ ಮಸೀದಿಯ ಅಧ್ಯಕ್ಷ ಡಾ. ಎಂ.ಕೆ. ಇಕ್ಬಾಲ್ ಹುಸೇನ್, ಇನ್ನಿತರ ಮಸೀದಿಗಳ ಅಧ್ಯಕ್ಷರುಗಳಾದ ಡಿ.ಎ. ಸುಲೈಮಾನ್, ಅಕ್ಬರ್, ಕಾರ್ಯದರ್ಶಿ ಅಶ್ರಪ್, ಧರ್ಮಗುರುಗಳು ಸುಮಾರು ನೂರಾರು ಮಂದಿ ಮುಸ್ಲಿಂ ಬಾಂಧವರು ಹಾಜರಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪೊಲೀಸ್ ಠಾಣಾಧಿಕಾರಿ ಅವರ ಮುಖಾಂತರ ಹಾಗೂ ತಾಲೂಕು ತಹಶೀಲ್ದಾರ್ ಅವರಿಗೆ ಕಂದಾಯ ಅಧಿಕಾರಿಗಳ ಮುಖಾಂತರ ಮನವಿ ಪತ್ರ ಅರ್ಪಿಸಲಾಯಿತು.
ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯ ಸಹಾಯಕ ಹೆಚ್.ಎಂ. ಗೋವಿಂದ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.