ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘ ಬಸಪ್ಪ ಶಿಶು ವಿಹಾರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಹಿತಿ ಕೂಪದೀರ ಸುಂದರಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಭಾರತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯೆಯರು, ಸಿಬ್ಬಂದಿಗಳು ಹಾಜರಿದ್ದರು.
ಅರಂತೋಡು: 2018-19ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನಕ್ಕೆ ಒಲಿದಿದೆ. 2001 ರಲ್ಲಿ ಟಿ.ಎಂ. ಶಹೀದ್ ಸ್ಥಾಪಕಾಧ್ಯಕ್ಷರಾಗಿ ಸ್ಥಾಪಿಸಿದ ಸಂಸ್ಥೆಯು ಹಲವು ಸಾಮಾಜಿಕ ಶೈಕ್ಷಣಿಕ, ಸಾಹಿತ್ಯ, ಧಾರ್ಮಿಕ, ಕ್ರೀಡೆ, ಸಹಕಾರಿ, ಆರೋಗ್ಯ ಮೊದಲಾದ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದೆ. ಸಂಸ್ಥೆಯ ವತಿಯಿಂದ ನರ್ಸರಿ ಯಿಂದ ಆಂಗ್ಲ ಮಾಧ್ಯಮ ಪ್ರೌಢಶಾಲೆವರೆಗೆ ಶಿಕ್ಷಣ ಸಂಸ್ಥೆ ತೆಕ್ಕಿಲ್ ಸಮುದಾಯ ಭವನ, 2 ಶಾಲಾ ವಾಹನ ಮತ್ತು ಅಂಬ್ಯುಲೆನ್ಸ್ ಮುಂತಾದವುಗಳನ್ನು ಹೊಂದಿದ್ದು, ಬಡವರಿಗೆ ರಿಯಾಯಿತಿ ದರದಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಸಾಮಾಜಿಕ ಕ್ರೀಡೆ ಇತರ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ಪ್ರಶಸ್ತಿಗಳನ್ನು ನೀಡಿದ್ದು ವಿವಿಧ ಸಂಘ-ಸಂಸ್ಥೆಗಳಿಗೆ, ದೇವಸ್ಥಾನ, ಭಜನಾ ಮಂದಿರ, ಚರ್ಚ್, ಮಸೀದಿ, ಮದರಸಗಳಿಗೆ, ಆರ್ಥಿಕ ಧನ ಸಹಾಯ ಮತ್ತು ಇತರ ಸಹಾಯವನ್ನು ನೀಡುತ್ತಿದೆ. ಸೇತುವೆ, ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಸರಕಾರದಿಂದ ಅನುದಾನವನ್ನು ದೊರಕಿಸಿ ಕೊಟ್ಟಿರುದಲ್ಲದೇ ಕೊಡಗು ನೆರೆ ಸಂತ್ರಸ್ತರಿಗೆ ಸುಮಾರು 28 ದಿನಗಳ ಸಮುದಾಯ ಭವನದಲ್ಲಿ ಉಚಿತ ವಾಸ್ತವ್ಯ ವ್ಯವಸ್ಥೆಯನ್ನು ಮತ್ತು ಇತರ ಸಂಘ-ಸಂಸ್ಥೆಗಳ ಜೊತೆ ಸಹಯೋಗದೊಂದಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಿಕೊಟ್ಟು ರಾಜ್ಯದಲ್ಲಿ ಮಾದರಿ ಸಂಸ್ಥೆಯಾಗಿ ರೂಪುಗೊಳಿಸುವಲ್ಲಿ ಟಿ.ಎಂ. ಶಹೀದ್ ಶ್ರಮಿಸಿದ್ದಾರೆ.
ಸಂಸ್ಥೆಯು ಸಲ್ಲಿಸಿರುವ ಈ ಎಲ್ಲಾ ಸಮಜ ಸೇವೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನಕ್ಕೆ ನೀಡಿದೆ.