ಶನಿವಾರಸಂತೆ, ನ. 10: ಪಟ್ಟಣದ ಜನತೆ ಮಂಗಳವಾದ ದೀಪಾವಳಿಯ ಮೊದಲ ದಿನದ ನರಕ ಚತುರ್ದಶಿ ಹಬ್ಬ ಹಾಗೂ 2ನೇ ದಿನ ಬುಧವಾರ ಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಸಂಪ್ರದಾಯದಂತೆ ನರಕ ಚತುರ್ದಶಿ ದಿನ ಬೆಳಿಗ್ಗೆ ಎಣ್ಣೆ ಅಭ್ಯಂಜನ ಸ್ನಾನ ಮಾಡಿ ನೂತನ ವಸ್ತ್ರ ಧರಿಸಿ, ಅಂಗಳದಲ್ಲಿ ರಂಗೋಲಿ ಬಿಡಿಸಿ, ಬಾಗಿಲಿಗೆ ಮಾವಿನೆಲೆ, ಚೆಂಡು ಹೂವಿನ ತೋರಣ ಕಟ್ಟಿ ಅಲಂಕರಿಸಿದರು. ಶ್ರೀ ಹರಿಯನ್ನು ಭಕ್ತಿಯಿಂದ ಪೂಜಿಸಿದರು. ಕೆಲವರ ಸಂಪ್ರದಾಯದಂತೆ ಅವಲಕ್ಕಿ ಪ್ರಸಾದ ವೈವೇದ್ಯ ಮಾಡಿ ಹಿರಿಯರಿಗೆ ಎಡೆ ಇಟ್ಟು ಭಕ್ತಿಯಿಂದ ನಮಿಸಿದರು. 2ನೇ ದಿನ ಬುಧವಾರ ಧನಲಕ್ಷ್ಮೀ ಪೂಜೆ ಮನೆಗಳಲ್ಲಿ ಮುತ್ತೈದೆಯರು ಕಲಶವಿಟ್ಟು ಲಕ್ಷ್ಮೀಯನ್ನು ಭಕ್ತಿಯಿಂದ ಪೂಜಿಸಿದರು. ಮನೆಗೆ ಹೆಣ್ಣುಮಕ್ಕಳನ್ನು ಕರೆದು ಅರಸಿನ ಕುಂಕುಮ ನೀಡಿ ಶುಭ ಹಾರೈಸಿದರು.
ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಾಳೆ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ವರ್ತಕರು ಶ್ರದ್ಧಾಭಕ್ತಿಯಿಂದ ಧನಲಕ್ಷ್ಮೀಯನ್ನು ಪೂಜಿಸಿದರು. ಗ್ರಾಹಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಚಂದ್ರಮೌಲೇಶ್ವರ - ಪಾರ್ವತಿ - ಗಣಪತಿ ದೇವಾಲಯ, ರಾಮಮಂದಿರ, ವಿನಯ ವಿನಾಯಕ ದೇವಾಲಯಗಳಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.