ಶ್ರೀಮಂಗಲ, ನ. 13: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೂ ಕೊಡವ ಜಾನಪದ ಕಲೆ, ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಬಾಲಕರಿಗೆ ಕೋಲಾಟ್, ಪರೆಯಕಳಿ, ಬಾಳೊಪಾಟ್ ಸೇರಿದಂತೆ ಬಾಲಕಿಯರು ಹಾಗೂ ಮಹಿಳೆಯರಿಗೆ ಉಮ್ಮತಾಟ್ ತರಬೇತಿಯನ್ನು ನೀಡಲಾಗುತ್ತಿದೆ.

ಪುತ್ತರಿ ಕೋಲಾಟದ ಬಗ್ಗೆ ಹಿರಿಯ ಕೊಡವ ಸಾಂಸ್ಕøತಿಕ ಮತ್ತು ಜಾನಪದ ತಜ್ಞರಾದ ಕಾಳಿಮಾಡ ಮೋಟಯ್ಯರವರು ತರಬೇತಿ ನೀಡುತ್ತಿದ್ದು, ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಉಮ್ಮತಾಟ್ ಬಗ್ಗೆ ಚೊಟ್ಟೇಕಾಳಪಂಡ ಆಶಾ ಪ್ರಕಾಶ್, ಕಳ್ಳಿಚಂಡ ಬೀನಾ ಕೃಷ್ಣ, ಬಲ್ಲಾಡಿಚಂಡ ಕಸ್ತೂರಿ ಸೋಮಯ್ಯ ತರಬೇತಿ ನೀಡುತ್ತಿದ್ದಾರೆ.

ಪ್ರತಿ ದಿನ ಸಂಜೆ 4.30 ರಿಂದ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ಪಾಲ್ಗೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ಕಾಳಿಮಾಡ ಮೋಟಯ್ಯರವರು ಸದ್ಯದಲ್ಲೇ ಬರುವ ಪುತ್ತರಿ ನಮ್ಮೆಯ ಪ್ರಯುಕ್ತದ ಕೋಲ್ ಮಂದ್‍ಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕೊಡವ ಸಂಸ್ಕøತಿ ಹಾಗೂ ಕಲೆಯ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುತ್ತರಿ ಮಂದ್‍ನಲ್ಲಿ ಪುತ್ತರಿ ಕೋಲ್ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು, ಮಂದ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಮಂದ್ ಆಚರಣೆಗೆ ಜೀವಂತಿಕೆ ತುಂಬುವ ನಿಟ್ಟಿನಲ್ಲಿ ಈ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ತರಬೇತುದಾರ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಮಾತನಾಡಿ, ಉಮ್ಮತಾಟ್ ಕಲೆಯ ಬಗ್ಗೆ ಆಸಕ್ತಿ ಇದ್ದು, ಅದನ್ನು ಕಲಿಯಬೇಕೆನ್ನುವ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಈ ಕಲೆಯನ್ನು ಕಲಿಸಲು ಪೊನ್ನಂಪೇಟೆ ಕೊಡವ ಸಮಾಜದ ಮೂಲಕ ವೇದಿಕೆ ಕಲ್ಪಿಸಲಾಗಿದೆ. ನಿರೀಕ್ಷೆಗೂ ಮೀರಿ ತರಬೇತಿಗೆ ಮಹಿಳೆಯರು ಬರುತ್ತಿದ್ದು, ಈ ಬಾರಿ ಪೊನ್ನಂಪೇಟೆ ಕೊಡವ ಸಮಾಜದ ಪುತ್ತರಿ ಮಂದ್‍ನಲ್ಲಿ ಮಹಿಳೆಯರ ಕೊಡವ ಕೋಲಾಟ್ ಪ್ರದರ್ಶನ ನಡೆಸಲೂ ಸಹ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ತರಬೇತಿ ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್ ಅಲ್ಲದೆ ಪದಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.