ಮಡಿಕೇರಿ, ನ. 13: ಪರಿಶಿಷ್ಟ ಸಮುದಾಯದ ಕಾಲೋನಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಮತ್ತಿತರ ಮೂಲ ಸೌಲಭ್ಯವನ್ನು ಕಲ್ಪಿಸುವಂತೆ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಪ್ರಕರಣಗಳ ಬಗ್ಗೆ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟರಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ಕಾಲಮಿತಿಯೊಳಗೆ ಬಳಕೆ ಮಾಡಬೇಕು. ಈ ಸಂಬಂಧ ಗಮನ ಹರಿಸುವಂತೆ ಉಪ ವಿಭಾಗಾಧಿಕಾರಿ ಸೂಚನೆ ನೀಡಿದರು.
ಸಮಿತಿ ಸದಸ್ಯ ಕುಡಿಯರ ಮುತ್ತಪ್ಪ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ಮೊಣ್ಣಂಗೇರಿಯ ಮಂಜುಳ ಕೊಚ್ಚಿಹೋಗಿದ್ದು, ಇದುವರೆಗೆ ಪರಿಹಾರ ನೀಡಿಲ್ಲ, ತಕ್ಷಣವೇ ಪರಿಹಾರ ನೀಡುವಂತಾಗ ಬೇಕು ಎಂದು ಗಮನ ಸೆಳೆದರು.
ಈ ಸಂಬಂಧ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಡಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲಾಗುವದು ಎಂದು ತಿಳಿಸಿದ್ದಾರೆ.
ಸಮಿತಿ ಸದಸ್ಯ ಪಾಪು ಸಣ್ಣಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸುವದು ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಶಿಷ್ಟರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ದೊರಕುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಸದಸ್ಯ ಪಾಲಾಕ್ಷ ಅವರು ಪರಿಶಿಷ್ಟ ಕಾಲೋನಿಗಳಲ್ಲಿ ಇನ್ನೂ ಸಹ ಮೂಲ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಮೂಲ ನಿವಾಸಿ ಕಾಲೋನಿಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.
ಜಿ.ಪಂ. ಸದಸ್ಯ ಕುಮಾರ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಇನ್ನೂ ಸಹ ಮುಖ್ಯವಾಹಿನಿಯಿಂದ ದೂರವಿದ್ದು, ಅಂತಹ ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಡಿ.ವೈ.ಎಸ್.ಪಿ. ಸುಂದರ ರಾಜ್, ಪೌರಾಯುಕ್ತ ಎಂ.ಎಲ್. ರಮೇಶ್, ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಇಒಗಳಾದ ಜಯಣ್ಣ, ಸುನಿಲ್, ನೋಡೆಲ್ ಅಧಿಕಾರಿ ಚಿಕ್ಕಬಸವಯ್ಯ, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಶೇಖರ್, ಪ್ರೀತಿ, ಚಂದ್ರಶೇಖರ್, ಮಂಜುನಾಥ್ ಇತರರು ಇದ್ದರು.
ಸಫಾಯಿ ಕರ್ಮಚಾರಿ ನಿಗಾ ಸಮಿತಿ ಸಭೆ: ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅಧ್ಯಕ್ಷತೆಯಲ್ಲಿ ಉಪ ವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ನಿಗಾ ಸಮಿತಿ ಸಭೆ ನಡೆಯಿತು. ಪೌರ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ಕಲ್ಪಿಸುವದು, ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವದು, ಕೆಲಸದ ಸಂದರ್ಭದಲ್ಲಿ ಗ್ಲೌಸ್ ಮತ್ತಿತರ ಅಗತ್ಯ ಪರಿಕರಗಳ ಬಳಸಿ, ಯಂತ್ರ ಚಾಲಿತವಾಗಿ ಕಾರ್ಯನಿರ್ವ ಹಿಸಬೇಕು. ಯಾವದೇ ಕಾರಣಕ್ಕೂ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳು ಕಂಡುಬರಬಾರದು ಎಂದು ಉಪ ವಿಭಾಗಾಧಿಕಾರಿ ನಿರ್ದೇಶನ ನೀಡಿದರು.
ಪೌರ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ನೀಡುವದು, ಕುಂದು ಕೊರತೆ ಪರಿಹರಿಸುವದು ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.