ಕೂಡಿಗೆ, ನ. 13: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಬೃಹತ್ ಕೈಗಾರಿಕಾ ಘಟಕವಿದ್ದು, ರಸ್ತೆಗಳು ತೀರಾ ಹಾಳಾಗಿದೆ. ಯಾವದೇ ದೊಡ್ಡ ಮತ್ತು ಸಣ್ಣ ಲಾರಿಗಳು ಚಲಿಸದಂತೆ ಗುಂಡಿ ಬಿದ್ದಿದ್ದು, ಲಾರಿ ಮಗುಚಿ ಬಿದ್ದಿರುವ ಘಟನೆಗಳು ಸಂಭವಿಸುತ್ತಿವೆ. ಗುಂಡಿಗಳನ್ನು ಸರಿಪಡಿಸಲು ಅನೇಕ ಬಾರಿ ಕೈಗಾರಿಕಾ ಪ್ರದೇಶ ನಿಯಂತ್ರಣ ಮಂಡಳಿಯವರಿಗೆ ತಿಳಿಸಿದರೂ ಯಾವದೇ ರೀತಿಯ ಪ್ರಯೋಜನವಾಗಿಲ್ಲ. ಈ ಪ್ರದೇಶದಲ್ಲಿ 25 ಕ್ಕೂ ಅಧಿಕ ಕಾಫಿ ಸಂಸ್ಕರಣಾ ಘಟಕಗಳು, ಕೈಗಾರಿಕಾ ಉಪ ಘಟಕಗಳು ಹಾಗೂ ಇನ್ನಿತರ ಗೃಹೋಪಯೋಗಿ ಕೈಗಾರಿಕಾ ಘಟಕಗಳು ಇದ್ದು, ರಸ್ತೆಯ ದುರಸ್ತಿಯಿಂದಾಗಿ ಭಾರೀ ತೊಂದರೆಯಾಗುತ್ತಿದೆ. ಈ ಕೇಂದ್ರಕ್ಕೆ ಸಾವಿರಾರು ಕಾರ್ಮಿಕರು ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಚಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ರಸ್ತೆ ದುರಸ್ತಿ ಮಾಡುವಂತೆ ಒಂದು ವಾರ ಗಡುವು ನೀಡಲಾಗಿದ್ದು, ನಂತರ ಕುಶಾಲನಗರ ಲಾರಿ ಮಾಲೀಕರ ಸಂಘದ ವತಿಯಿಂದ ಕೈಗಾರಿಕಾ ಘಟಕ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗಣಪತಿ ಮತ್ತು ಸದಸ್ಯರು ಎಚ್ಚರಿಕೆ ನೀಡಿದ್ದಾರೆ.