ಸೋಮವಾರಪೇಟೆ, ನ. 13: ಕಳೆದ 22 ವರ್ಷಗಳಿಂದ ಹಲವು ರಾಜಕೀಯ ತಂತ್ರಗಾರಿಕೆಗಳ ಮೂಲಕ ಆಡಳಿತ ನಡೆಸಿದ್ದ ಭಾರತೀಯ ಜನತಾ ಪಾರ್ಟಿ, ಇದೀಗ ಮುಕ್ತಾಯಗೊಂಡ ಚುನಾವಣೆಯಲ್ಲಿ ಮೈತ್ರಿಕೂಟದೆದುರು ಮಂಡಿಯೂರಿದ್ದರೂ ಸಹ ಅಧಿಕಾರ ಸ್ಥಾಪಿಸುವ ಕನಸನ್ನು ಜೀವಂತವಿಟ್ಟು ಕೊಂಡಿದೆ ಎಂಬ ರಾಜಕೀಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಒಟ್ಟು 11 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 4 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೊಡ್ಡಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಹಾಗೂ 3 ಸ್ಥಾನಗಳಲ್ಲಿ ಜಯಗಳಿಸಿರುವ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಆಡಳಿತ ನಡೆಸಲು ಸಕಲ ಸಿದ್ಧತೆಗಳು ನಡೆಸುತ್ತಿರುವ ಮಧ್ಯೆ, ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುವ ಭೀತಿ ಎದುರಾಗಿದೆ ಎನ್ನಲಾಗಿದೆ.

ಮೈತ್ರಿಕೂಟದ ಎರಡೂ ಪಕ್ಷಗಳ ಬಲ 7 ಸ್ಥಾನಗಳಿದ್ದರೆ, ಬಿಜೆಪಿಯಿಂದ ನೇರವಾಗಿ ಆಯ್ಕೆಯಾದ ಮೂವರು ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿದಂತೆ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿ ಜಯ ಗಳಿಸಿರುವ ಒಂದು ಸ್ಥಾನ ಸೇರಿದರೆ 6 ಮತಗಳು ಒಟ್ಟಾಗಲಿವೆ.

ಕೇವಲ 1 ಮತದ ಅಂತರದಲ್ಲಿ ಅಧಿಕಾರ ಬಿಟ್ಟುಕೊಡಬೇಕೇ? ಎಂಬ ಪ್ರಶ್ನೆಯನ್ನು ನೂತನವಾಗಿ ಆಯ್ಕೆಯಾಗಿರುವ ಸದಸ್ಯರು, ಪಕ್ಷದ ಮುಖಂಡರಿಗೆ ಕೇಳುತ್ತಿದ್ದಾರೆ. ಈ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರೊಂದಿಗೂ ಚರ್ಚಿಸಿರುವ ಕೆಲ ಸದಸ್ಯರು, ಅಧಿಕಾರ ಹಿಡಿಯುವ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ.

ತಾಲೂಕಿನ ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳಲ್ಲಿ ಮೈತ್ರಿಕೂಟ ಆಡಳಿತ ಹಿಡಿಯುವ ಬಗ್ಗೆ ಚರ್ಚೆ ನಡೆದಿದ್ದು, ಕುಶಾಲನಗರದಲ್ಲಿ ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟರೆ, ಸೋಮವಾರಪೇಟೆಯಲ್ಲಿ ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ. ಈ ಕಾರ್ಯತಂತ್ರ ಅದಲು ಬದಲಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರಪೇಟೆ ಪ.ಪಂ.ನಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಾಯ ಕೆಲ ಸದಸ್ಯರಿಂದ ಕೇಳಿಬಂದಿದ್ದು, ಅದರಂತೆ ಹಿರಿಯ ಕಾಂಗ್ರೆಸ್ಸಿಗರಾದ ಉದಯಶಂಕರ್, ಬಿ.ಸಿ. ವೆಂಕಟೇಶ್ ಮತ್ತು ಸಂಜೀವ ಅವರುಗಳು ಪ್ರಬಲ ಆಕಾಂಕ್ಷಿ ಗಳಾಗಿದ್ದಾರೆ.

ಮುಖಂಡರ ಮಾತುಕತೆಯಂತೆ ಕುಶಾಲನಗರದಲ್ಲಿ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ನೀಡಿದರೆ, ಸೋಮವಾರಪೇಟೆ ಯಲ್ಲಿ ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ ನೀಡಬೇಕಾಗುತ್ತದೆ. ಅಂತಹ ಸನ್ನಿವೇಶ ನಿರ್ಮಾಣವಾದರೆ ಪರಿಸ್ಥಿತಿಯ ಲಾಭವನ್ನು ಪಡೆಯಲು ಬಿಜೆಪಿ ಹಿಂದೆ ಬೀಳುವದಿಲ್ಲ ಎಂದು ಪಕ್ಷದ ಮೂಲಗಳು ಅಭಿಪ್ರಾಯಿಸಿವೆ.

ಬಿಜೆಪಿಗೆ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿ ಜಯಗಳಿಸಿರುವ ಶುಭಕರ್ ಅವರ ನಡೆ ಇನ್ನೂ ಗುಪ್ತವಾಗಿದೆ. ಆದರೆ ಪಕ್ಷೇತರ ಅಭ್ಯರ್ಥಿ ಜೆಡಿಎಸ್‍ಗೆ ಬೆಂಬಲ ಸೂಚಿಸಲಿದ್ದಾರೆ. ಆಗ ನಮ್ಮ ಸಂಖ್ಯಾಬಲವೂ 4ಕ್ಕೆ ಏರಿಕೆಯಾಗುತ್ತದೆ ಎಂದು ಜೆಡಿಎಸ್‍ನ ಕೆಲವರು, ಕಾಂಗ್ರೆಸ್ ಸದಸ್ಯರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.

ಮೈತ್ರಿಕೂಟದ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಿರುವ ಬಿಜೆಪಿ, ಅಂತಿಮ ಕ್ಷಣದವರೆಗೂ ಆಪರೇಷನ್ ಕಮಲಕ್ಕೆ ಯತ್ನಿಸುವ ಸಂಭವವನ್ನು ಅಲ್ಲಗಳೆಯುವಂತಿಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದಂತೆ ಕಮಲ ಪಡೆ ಇನ್ನಷ್ಟು ಚುರುಕಾಗಲಿದೆ. ಬೇರೆ ಪಕ್ಷಗಳ ಅತೃಪ್ತರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಡೆಯುವ ಬಗ್ಗೆಯೂ ತಂತ್ರಗಾರಿಕೆ ನಡೆಯುತ್ತಿದೆ.

ಪಕ್ಷೇತರ ಅಭ್ಯರ್ಥಿ, ಶಾಸಕರು ಮತ್ತು ಸಂಸದರ ಮತಗಳೂ ಸೇರಿದರೆ 6 ಸಂಖ್ಯಾಬಲ ಇರಲಿದ್ದು, ಕೇವಲ 1 ಮತದಿಂದ ಅಧಿಕಾರ ಬಿಟ್ಟುಕೊಟ್ಟಬೇಕೇ? ಕ್ಷೇತ್ರದ ಶಾಸಕರು ನಮ್ಮ ಪಕ್ಷದವರೇ ಇದ್ದು, ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದ್ದು, ಈ ದಿಸೆಯಲ್ಲಿ ಬಿಜೆಪಿ ಸದಸ್ಯರು ಕಾರ್ಯನಿರ್ವಹಿಸಲಿದ್ದೇವೆ. ಅಧಿಕಾರ ಹಿಡಿಯುವ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದೇವೆ ಎಂದು ನೂತನವಾಗಿ ಆಯ್ಕೆಗೊಂಡಿರುವ ಬಿಜೆಪಿ ಸದಸ್ಯರೋರ್ವರು ಮಾಹಿತಿ ನೀಡಿದ್ದು, ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿರುವದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮೈತ್ರಿಕೂಟದ ಅಧಿಕಾರ : ಬಿಜೆಪಿಯ ಆಪರೇಷನ್ ಕಮಲಕ್ಕೆ ನಮ್ಮ ಸದಸ್ಯರು ಒಳಗಾಗುವದಿಲ್ಲ. ಕಾರ್ಯಕರ್ತರ ಶ್ರಮದಿಂದ ಅಭ್ಯರ್ಥಿ ಗಳು ಜಯಗಳಿಸಿದ್ದು, ಪ್ರಾಮಾಣಿಕ ರಾಗಿದ್ದಾರೆ. ಮೈತ್ರಿಕೂಟವೇ ಸೋಮವಾರಪೇಟೆಯಲ್ಲಿ ಆಡಳಿತ ನಡೆಸಲಿದೆ. ಯಾವ ಸದಸ್ಯರೂ ಬಿಜೆಪಿಗೆ ಬೆಂಬಲ ನೀಡುವದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ಹಂಚಿಕೆ ಮಾಡಲಾಗುವದು. ಹೊಂದಾಣಿಕೆ ಮೂಲಕ ಆಡಳಿತ ನಡೆಸಲು ಮಾರ್ಗದರ್ಶನ ನೀಡಲಾಗು ವದು. ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವದು ಎಂದು ಜೆಡಿಎಸ್ ಮುಖಂಡ, ಮಾಜೀ ಸಚಿವ ಬಿ.ಎ. ಜೀವಿಜಯ, ಕಾಂಗ್ರೆಸ್ ಮುಖಂಡ ಕೆ.ಎಂ. ಲೋಕೇಶ್ ಅವರುಗಳು ‘ಶಕ್ತಿ’ಗೆ ತಿಳಿಸಿದ್ದಾರೆ.

ಕಾದು ನೋಡುತ್ತೇವೆ-ರಂಜನ್ : ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು, ಅವರೇ ಆಡಳಿತ ನಡೆಸಲಿ; ನಾವುಗಳು ಕಾದು ನೋಡುತ್ತೇವೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಮೈತ್ರಿಕೂಟಕ್ಕೆ ಸವಾಲಾಗಿದೆ. ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಮೂಲಕ ಹೊಂದಾಣಿಕೆಯೊಂದಿಗೆ ಅಧಿಕಾರ ಸ್ಥಾಪಿಸಲು ನಾಯಕರುಗಳು ಕಸರತ್ತು ನಡೆಸುತ್ತಿದ್ದಾರೆ.

- ವಿಜಯ್ ಹಾನಗಲ್