ಮಡಿಕೇರಿ, ನ. 21: ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂತ್ರಸ್ತ ಮಹಿಳೆಯೊಬ್ಬರಿಂದ ರೂ. 20 ಸಾವಿರ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹದಳ ಬಲೆಗೆ ಸಿಲುಕಿರುವ ಸಂಬಂಧಿಸಿದ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ಹಾಗೂ ಸಿಬ್ಬಂದಿ ಮೋಹನ್ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.

ಅಲ್ಲದೆ, ರೈತರೊಬ್ಬರ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನೆಪದಲ್ಲಿ ರೂ. 7,500 ಮೊತ್ತದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಸಿಲುಕಿರುವ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಾದ್ ಆಲಿ ಸೌಕತ್ ಆಲಿ ದೊಡ್ಡಮನಿ ವಿರುದ್ಧವೂ ಕ್ರಮಕ್ಕೆ ಕೋರಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಖಚಿತಪಡಿಸಿದ್ದು, ಸಂಬಂಧಿಸಿದ ಇಲಾಖೆಗಳ ಮೇಲಾಧಿಕಾರಿಗಳಿಗೆ ತಪ್ಪಿತಸ್ಥರ ವಿರುದ್ಧ ಕ್ರಮದೊಂದಿಗೆ ಕರ್ತವ್ಯದಿಂದ ಅಮಾನತುಗೊಳಿಸಲು ವರದಿ ನೀಡಲಾಗಿದೆ ಎಂದು ‘ಶಕ್ತಿ’ ಸಂಪರ್ಕಿಸಿದಾಗ ಖಚಿತಪಡಿಸಿದ್ದಾರೆ.