ಮಡಿಕೇರಿ, ನ. 21 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿರುವ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೊಡ್ಲಿಪೇಟೆಯ ಕೃತಜ್ಞಾ ಬೆಸೂರು ಆಯ್ಕೆಯಾಗಿದ್ದಾರೆ.ಕ.ಸಾ.ಪ. ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಕೃತಜ್ಞಾಳನ್ನು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ನಂಜುಂಡಸ್ವಾಮಿ ವಿದ್ಯಾಪೀಠ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೃತಜ್ಞಾ ಹಿರಿಯ ಸಾಹಿತಿ ಸ್ನೇಹಬಸಮ್ಮ ಹಾಗೂ ಬಿ.ಎಸ್. ಸುರೇಂದ್ರ ದಂಪತಿಯರ ಪುತ್ರಿ. ಸಮ್ಮೇಳನ ಮುಂಬರುವ ಡಿಸೆಂಬರ್ 8 ರಂದು ಕೊಡ್ಲಿಪೇಟೆಯಲ್ಲಿ ನಡೆಯಲಿದೆ.ಸಮ್ಮೇಳನಕ್ಕೆ ಆಹ್ವಾನ ಮಾಡಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದು, ಅರ್ಹತೆಗನುಗುಣವಾಗಿ ವಿವಿಧ ಕಾರ್ಯ ಕ್ರಮಗಳಿಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಕ.ಸಾ.ಪ, ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಸಮಿತಿ ನಿರ್ದೇಶಕರುಗಳಾದ ಕಿಗ್ಗಾಲು ಗಿರೀಶ್, ಕೋಡಿ ಚಂದ್ರಶೇಖರ್, ತಳೂರು ಉಷಾರಾಣಿ, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ. ಸುಕುಮಾರ್ ಇನ್ನಿತರರಿದ್ದರು.