ಸೋಮವಾರಪೇಟೆ,ನ.21: ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಶತಮಾನದ ಮಹಾಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ಭಯಾನಕ ಸನ್ನಿವೇಶ ನಿರ್ಮಾಣವಾಗಿದ್ದು, ಜನಜೀವನ ಇಂದಿಗೂ ತಹಬದಿಗೆ ಬಂದಿಲ್ಲ. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಿ, ಅಗತ್ಯ ಪರಿಹಾರೋಪಾಯಗಳನ್ನು ಕಲ್ಪಿಸುವಂತೆ ಒತ್ತಾಯ ಮಾಡಿದ್ದರೂ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಸರ್ಕಾರ ಕೊಡಗಿನ ಬಗ್ಗೆ ಇದೇ ನಿರ್ಲಕ್ಷ್ಯ ಮುಂದುವರೆಸಿದರೆ ಜಿಲ್ಲೆಯಲ್ಲಿ ಹೋರಾಟದ ಕ್ರಾಂತಿ ನಡೆಸಬೇಕಾಗುತ್ತದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ.ಭಾರೀ ಭೂಕುಸಿತಕ್ಕೆ ಒಳಗಾಗಿ ತನ್ನ ನಿಜ ಸ್ವರೂಪವನ್ನು ಕಳೆದುಕೊಂಡಿರುವ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಸ್ಥಳೀಯರ ಅಹವಾಲು ಆಲಿಸಿದ ಶಾಸಕರು, ಸರ್ಕಾರದ ನಡೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಬಗ್ಗೆ ಇದೇ ರೀತಿಯ ನಿರ್ಲಕ್ಷ್ಯ ಮುಂದುವರೆದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಜಿಲ್ಲೆಯನ್ನು ಮರಳಿ ಹಿಂದಿನ ಸ್ಥಿತಿಗೆ ತರಲು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಜನರೆದುರು ಘೋಷಿಸಿದ್ದಾರೆ. ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಪರಿಹಾರ ಕಾರ್ಯಗಳು ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸರ್ಕಾರದಿಂದ ನಮಗೆ ಇಂದಿಗೂ ಪರಿಹಾರ ಹಣ ಸಿಕ್ಕಿಲ್ಲ ಎಂದು ಸಂತ್ರಸ್ಥರು ತಿಳಿಸಿದ ಸಂದರ್ಭ, ಸಿಡಿಮಿಡಿಗೊಂಡರು.

ಮಕ್ಕಂದೂರಿನ ಮೇಘತ್ತಾಳು, ಹೆಮ್ಮೆತ್ತಾಳು, ಹೊದಕಾನ, ಮುಕ್ಕೋಡ್ಲು, ಆವಂಡಿ ಸೇರಿದಂತೆ ಎಲ್ಲಾ ಗ್ರಾಮಗಳ ಸುಮಾರು 50 ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರಲ್ಲದೇ, ಸ್ಥಳೀಯರಿಂದ ಅಹವಾಲು ಆಲಿಸಿದರು. ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಮಾತ್ರ ದುರಸ್ತಿಗೊಳಿಸಲಾಗಿದ್ದು, ತೋಟ, ಗದ್ದೆಗಳಿಗೆ ತೆರಳುವ ರಸ್ತೆಗಳು ಇನ್ನೂ ದುರಸ್ತಿಯಾಗದಿರುವ ಬಗ್ಗೆ ಗ್ರಾಮಸ್ಥರು ಅವಲತ್ತುಕೊಂಡರು. ತಕ್ಷಣ ಗ್ರಾಮಸ್ಥರ ಕಾಫಿ ತೋಟ, ಗದ್ದೆಗಳಿಗೆ ತೆರಳುವ ರಸ್ತೆಗಳ ಕಾಮಗಾರಿಯನ್ನು ಪ್ರಾರಂಭಿಸುವಂತೆ ಜಿ.ಪಂ., ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಸಂತ್ರಸ್ಥರಿಗೆ ಸರ್ಕಾರದಿಂದ ಬಿಡುಗಡೆಯಾಗುವ ಪರಿಹಾರ ಹಣ ಇನ್ನೂ ಕೈಸೇರದಿರುವ ಬಗ್ಗೆ 30ಕ್ಕೂ ಅಧಿಕ ಮಂದಿ ಅಳಲು ತೋಡಿಕೊಂಡ ಸಂದರ್ಭ, ಈ ಬಗ್ಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನ ಸೆಳೆದು ಕ್ರಮಕೈಗೊಳ್ಳುವದಾಗಿ ಅಪ್ಪಚ್ಚು ರಂಜನ್ ಭರವಸೆ ನೀಡಿದರು.

ಪ್ರಾಧಿಕಾರ ರಚಿಸದಿದ್ದರೆ ಹೋರಾಟ: ಈ ಹಿಂದೆ ಕೊಡಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಕೊಡಗು ಪುನರ್ ನಿರ್ಮಾಣ

(ಮೊದಲ ಪುಟದಿಂದ) ಪ್ರಾಧಿಕಾರ ರಚಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇಂದಿಗೂ ಪ್ರಾಧಿಕಾರ ರಚನೆಯ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ. ಭೂಕುಸಿತದಿಂದ ತೋಟ, ಗದ್ದೆ,ಮನೆ, ನಿವೇಶನ ಕಳೆದು ಕೊಂಡಿರುವವರಿಗೆ ಇದುವರೆಗೂ ಯಾವದೇ ಪರಿಹಾರಗಳು ಲಭಿಸಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಗಂಭೀರವಾಗಿ ಕಾರ್ಯರೂಪಕ್ಕಿಳಿಯಬೇಕು. ತಕ್ಷಣ ಈ ಬಗ್ಗೆ ಗಮನ ಹರಿಸದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಚಳುವಳಿ ನಡೆಸಬೇಕಾಗುತ್ತದೆ ಎಂದು ರಂಜನ್ ‘ಶಕ್ತಿ’ಯೊಂದಿಗೆ ಎಚ್ಚರಿಸಿದರು.

ಹಾರಂಗಿಯಲ್ಲಿ ಹೂಳು ತೆಗೆಯಲು ಆಗ್ರಹ: ಹಾರಂಗಿ ಜಲಾಶಯಕ್ಕೆ ನೀರು ಹರಿಯುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿರುವ ಹಿನ್ನೆಲೆ, ನದಿತೊರೆಗಳು ತಮ್ಮ ದಿಕ್ಕನ್ನು ಬದಲಿಸಿಕೊಂಡಿದೆ. ಮಳೆಗಾಲದಲ್ಲಿ ಭಾರೀ ಪ್ರಮಾಣದ ಮಣ್ಣು ಹಾರಂಗಿ ಜಲಾಶಯ ಸೇರಿದೆ. ಅಂದಾಜು 2 ಟಿಎಂಸಿಯಷ್ಟು ಹೂಳು ತುಂಬಿರುವ ಸಾಧ್ಯತೆಯಿದ್ದು, ಜಲಾಶಯದ ಹೂಳು ತೆಗೆಯಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವದು ಎಂದರು.

ಗುತ್ತಿಗೆದಾರರಿಗೆ ಪೈಸೆಯೂ ಬಂದಿಲ್ಲ: ಪ್ರವಾಹ ಸಂದರ್ಭ ಜಿಲ್ಲೆಯ ಹಲವಷ್ಟು ರಸ್ತೆಗಳು ಕೊಚ್ಚಿಹೋಗಿದ್ದು, ತಕ್ಷಣಕ್ಕೆ ಸಂಪರ್ಕ ಸಾಧಿಸಲು ತಾವೂ ಸೇರಿದಂತೆ ಉಸ್ತುವಾರಿ ಸಚಿವರ ಮನವಿ ಮೇರೆಗೆ ಹಲವಷ್ಟು ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ್ದು, ಇದುವರೆಗೂ ಸರ್ಕಾರದಿಂದ ಒಂದು ಪೈಸೆಯನ್ನೂ ಗುತ್ತಿಗೆದಾರರಿಗೆ ಕೊಟ್ಟಿಲ್ಲ ಎಂದರು.

ಈ ಮಧ್ಯೆ ಪಂಚಾಯತ್ ರಾಜ್ ಇಲಾಖಾ ಕಾರ್ಯದರ್ಶಿ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಕರೆಯುವಂತೆ ಇಂಜಿನಿಯರ್‍ಗಳಿಗೆ ಸೂಚನೆ ನೀಡುತ್ತಿರುವ ಬಗ್ಗೆ ತಿಳಿದುಬಂದಿದ್ದು, ಈಗಾಗಲೇ ಹಲವಷ್ಟು ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಟೆಂಡರ್ ಕರೆಯುವ ಅಗತ್ಯವೇನಿದೆ? ತಕ್ಷಣ ಕಾಮಗಾರಿ ಪರಿಶೀಲಿಸಿ ಸಂಬಂಧಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆಗೊಳಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿಶೇಷ ಅಧಿಕಾರವಿದ್ದು, ತಕ್ಷಣ ಗಮನ ಹರಿಸಬೇಕು ಎಂದು ರಂಜನ್ ಹೇಳಿದರು.

ಕೊಡಗಿಗೆ ಕೇಂದ್ರದಿಂದ ಪರಿಹಾರ: ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಡಿ ಬಿಡುಗಡೆಯಾಗಿರುವ ಹಣವನ್ನು ಜಿಲ್ಲೆಗೆ ಬಳಸಿಕೊಳ್ಳ ಬೇಕಾಗಿದೆ. ಕೊಡಗಿಗೆ 546.21 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಸ್ವತಃ ಸದಾನಂದಗೌಡರೇ ತಿಳಿಸಿದ್ದಾರೆ ಎಂದ ರಂಜನ್, ಇದರೊಂದಿಗೆ ರಾಜ್ಯ ಸರ್ಕಾರದಿಂದ ಆರ್‍ಡಿಪಿಆರ್ ಮತ್ತು ಲೋಕೋಪ ಯೋಗಿ ಇಲಾಖೆಯಿಂದ ತಲಾ 500 ಕೋಟಿ, ಕೃಷಿ ಇಲಾಖೆ ಯಿಂದ ಕನಿಷ್ಟ 300 ಕೋಟಿ ಅನುದಾನವನ್ನು ಕೊಡಗಿಗೆ ಬಿಡುಗಡೆ ಮಾಡಬೇಕು ಎಂದರು.

ಮಂದಗತಿಯಲ್ಲಿ ಕಾಮಗಾರಿ: ಕೊಡಗಿನ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತೆ ಕಂಡುಬರುತ್ತಿಲ್ಲ. ಪರಿಹಾರ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಸಂತ್ರಸ್ಥರಿಗೆ ಪುನರ್‍ವಸತಿ ಕಲ್ಪಿಸುವ ಕೆಲಸಗಳೂ ವಿಳಂಬವಾಗುತ್ತಿವೆ. ಪ್ರಾಧಿಕಾರ ರಚನೆಯನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರ ಸ್ನೇಹಿತರು ಜಿಲ್ಲೆಯಲ್ಲಿ 100 ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ. ಎಲ್ಲೆಡೆಯಿಂದಲೂ ಸಹಕಾರ ಕೊಡಲು ಸಂಘಸಂಸ್ಥೆ, ದಾನಿಗಳು ಮುಂದೆ ಬಂದಿದ್ದರೂ ಸರ್ಕಾರ ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ. ಇಂತಹ ಧೋರಣೆ ಮುಂದುವರೆದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಾಸಕ ರಂಜನ್ ಅಭಿಪ್ರಾಯಿಸಿದ್ದಾರೆ.