ಮಡಿಕೇರಿ, ನ. 25: ಇಪ್ಪತ್ತನೇ ಜಾನುವಾರು ಗಣತಿಯನ್ನು ವ್ಯವಸ್ಥಿತವಾಗಿ ನಡೆಸಿ ಪ್ರಗತಿ ಸಾಧಿಸುವಂತೆ ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಜಾನುವಾರು ಗಣತಿ ಕಾರ್ಯಕ್ಕೆ ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳಿಂದ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಈ ಅಧಿಕಾರಿ, ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಡಾ.ತಮ್ಮಯ್ಯ ಅವರು 20ನೇ ಜಾನುವಾರು ಗಣತಿಯು ಈಗಾಗಲೇ ಆರಂಭವಾಗಿದ್ದು, ಡಿ. 31 ರವರೆಗೆ ನಡೆಯಲಿದೆ. ಆ ನಿಟ್ಟಿನಲ್ಲಿ ಪ್ರಥಮವಾಗಿ ರಾಷ್ಟ್ರಾದ್ಯಂತ ಟ್ಯಾಬ್ಲೆಟ್ ಮತ್ತು ವೆಬ್ ಆಧಾರಿತ ತಂತ್ರಾಂಶ ಮೂಲಕ ಕೈಗೊಳ್ಳಲಾಗುತ್ತದೆ. ಸಾಫ್ಟ್‍ವೇರ್ ಆಧಾರಿತ ಜಾನುವಾರು ಗಣತಿ ಆಗಿರುವದರಿಂದ ಆನ್‍ಲೈನ್‍ನಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಜಾನುವಾರು ಗಣತಿ ಸಂಬಂಧಿಸಿ ದಂತೆ 56 ಸಿಬ್ಬಂದಿಗಳನ್ನು ನಿಯೋಜಿಸ ಲಾಗಿದ್ದು, 11 ಮೇಲ್ವಿಚಾರಕರು, ಮೂವರು ಪರಿಶೀಲನಾ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ ಎಂದು ಮಾಹಿತಿ ನೀಡಿದರು.

ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಮೊಲ, ಆನೆ ಕುಕ್ಕುಟಗಳಾದ ಕೋಳಿ, ಪಶುಪಾಲನೆಯಲ್ಲಿ ಉಪಯೋಗಿಸುವ ಉಪಕರಣಗಳಾದ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಯಂತ್ರ ಬಗ್ಗೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ರೈತಾಪಿ ಸಮುದಾಯಕ್ಕೆ ಪಶುಸಂಗೋಪನೆ ಒಂದು ಪ್ರಮುಖ ಚಟುವಟಿಕೆಯಾಗಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಪಶು ಸಂಪತ್ತು ಪ್ರಮುಖ ಪಾತ್ರವಾಗಿರುತ್ತದೆ ಎಂದು ಡಾ.ತಮ್ಮಯ್ಯ ಮಾಹಿತಿ ನೀಡಿದರು. ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯ, ಪೌರಾಯುಕ್ತ ಎಂ.ಎಲ್. ರಮೇಶ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ ಭರತ್ ಇತರರು ಇದ್ದರು.