ಗೋಣಿಕೊಪ್ಪ ವರದಿ, ನ. 25: ಲಯನ್ಸ್ ವತಿಯಿಂದ ಭೂಕುಸಿತದ ಕೊಡಗಿನ 4 ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ ಎಂದರು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ತಿಳಿಸಿದರು.

ಕೊಡಗಿನಲ್ಲಿ ನಡೆದ ಭೂಕುಸಿತ ಸಂದರ್ಭ ಲಯನ್ಸ್ ಸಂಸ್ಥೆ ಕೂಡ ಉತ್ತಮ ಸೇವಾ ಕಾರ್ಯಗಳನ್ನು ನಡೆಸಿದೆ. ಸಂತ್ರಸ್ತರಿಗೆ ಬೇಕಾದ ವಸ್ತುಗಳನ್ನು ತಲಪಿಸುವಲ್ಲಿ ಲಯನ್ಸ್ ಸಮೂಹ ತೊಡಗಿಕೊಂಡು ಸೇವೆ ಮಾಡಿದೆ. ಇದರಂತೆ ಮನೆ ಕಳೆದುಕೊಂಡು ಸರ್ಕಾರದಿಂದ ಮನೆ ಪಡೆದುಕೊಳ್ಳಲು ಆಗದವರಿಗೆ ಮನೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಲವೊಂದು ಸಂತ್ರಸ್ತರು ಜಾಗದ ದಾಖಲಾತಿ ಅವರ ಹೆಸರಿನಲ್ಲಿ ಇಲ್ಲದ ಕಾರಣ ಸರ್ಕಾರದ ಮನೆ ಯೋಜನೆ ಅನುಷ್ಠಾನದಿಂದ ವಂಚಿತರಾ ಗುತ್ತಿದ್ದಾರೆ. ಇಂತಹ 4 ಬಡತನದ ಕುಟುಂಬಗಳಿಗೆ ಮನೆ ನಿರ್ಮಿಸಲು ಮುಂದಾಗಿದ್ದೇವೆ. ಲಯನ್ಸ್ ತಂಡ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದೆ. ಲಯನ್ಸ್ ಸೇವಾ ನಿಧಿಯಿಂದ ಮನೆ ನಿರ್ಮಾಣ ಮಾಡಲಾಗುವದು. ಆರ್ಥಿಕ ಕ್ರೋಢೀಕರಣ ನಡೆಯುತ್ತಿದೆ ಎಂದರು.

ಲಯನ್ಸ್ ಸಂಸ್ಥೆ ಸೇವೆ ಹಾಗೂ ಸ್ನೇಹದಿಂದ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಕಡೆಗಳಲ್ಲಿ ಕೃಷಿಗೆ ಒತ್ತು ನೀಡಲು ಮುಂದಾಗಿದೆ. ಲಯನ್ಸ್ ಸಂಸ್ಥೆ ಜಾಗ ದತ್ತು ಪಡೆದು ಕೃಷಿ ಚಟುವಟಿಕೆ ಮೂಲಕ ಸದಸ್ಯರು ಹಾಗೂ ವಿದ್ಯಾರ್ಥಿಗಳನ್ನು ಕೃಷಿಯತ್ತ ಒಲವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಲಯನ್ಸ್ ಹೆಚ್ಚು ಮಹಿಳಾ ಸದಸ್ಯರನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ತೊಡಗಿಕೊಂಡಿದೆ ಎಂದರು.

ಗೋಷ್ಠಿಯಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಶ್, ಕಾರ್ಯದರ್ಶಿ ಪಿ.ಎಂ. ಜೀವನ್, ಖಜಾಂಚಿ ಕೆ.ಬಿ. ಅಚ್ಚಯ್ಯ, ಪ್ರಾಂತ್ಯ ಅಧ್ಯಕ್ಷ ಪಾರುವಂಗಡ ಪೆಮ್ಮಯ್ಯ, ನಿರ್ಗಮಿತ ಅಧ್ಯಕ್ಷ ಜಮ್ಮಡ ಎಸ್. ಮಾದಪ್ಪ, ಪ್ರಮುಖರುಗಳಾದ ಗಣಪತಿ ಇದ್ದರು.