ಮಡಿಕೇರಿ, ನ. 25: ಪ್ರತಿ ಮಗು ದೇಶದ ಆಸ್ತಿಯಾಗಿದ್ದು, ಶಿಶುಗಳ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸುವಂತಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಯಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ನೀಲೇಶ್ ತಿಳಿಸಿದ್ದಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ನಡೆದ ‘ನವಜಾತ ಶಿಶು ಸಾಪ್ತಾಹ ಆಚರಣೆ ಹಾಗೂ ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಜಗದೀಶ್ ಮಾತನಾಡಿ ಶಿಶುವಿಗೆ ಹಾಲು ಕುಡಿಸುವಾಗ ಎಚ್ಚರಿಕೆ ವಹಿಸಬೇಕು. ಮಗು ಬೆಳವಣಿಗೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಯಾವ ಸಂದರ್ಭದಲ್ಲಿ ಯಾವ ರೀತಿಯ ಆಹಾರ ನೀಡಬೇಕು ಎಂಬದರ ಬಗ್ಗೆ ತಾಯಂದಿರಿಗೆ ಮಾಹಿತಿ ಇರಬೇಕು ಎಂದರು.

ಮಕ್ಕಳ ತಜ್ಞ ಡಾ. ಕೃಷ್ಣಾನಂದ ಮಾತನಾಡಿ, ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಬೇಕು. ಮಗುವಿನ ರಕ್ಷಣೆ ಬಗ್ಗೆ ತಾಯಂದಿರಲ್ಲಿ ಮಾಹಿತಿ ಇರಬೇಕು ಎಂದು ಸಲಹೆ ಮಾಡಿದರು. ಡಾ. ಶಿವರಾಜ್ ಮಾತನಾಡಿ ಕೆಲವೊಂದು ಸೋಂಕಿನಿಂದ ಶಿಶುಗಳು ಮರಣ ಹೊಂದಬಹುದು, ಆದ್ದರಿಂದ ಆಸ್ಪತ್ರೆಗೆ ತೆರಳಿ ವೈದ್ಯರ ಮಾರ್ಗ ದರ್ಶನ ಪಡೆಯುವಂತಾಗಬೇಕು ಎಂದರು. ಡಾ. ಕಿರಣ್ ಮಾತನಾಡಿ ರಕ್ತಹೀನತೆ, ರಕ್ತದೊತ್ತಡ ಮತ್ತಿತರ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಮಗುವಿನ ಪಾಲನೆ ಮತ್ತು ಪೋಷಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ನವಜಾತ ಶಿಶು ಸಪ್ತಾಹಕ್ಕೆ ಚಾಲನೆ ನೀಡಲಾಯಿತು.