ಸೋಮವಾರಪೇಟೆ, ನ. 25: ತಮ್ಮಲ್ಲಿರುವ ಹಣವನ್ನು ಕ್ರೂಢೀಕರಿಸಿ ಕೊಂಡು, ಒಗ್ಗಟ್ಟಿನ ಮೂಲಕ ಸಮಾಜ ಸೇವೆ ಮಾಡುತ್ತಿರುವ ಜೇಸೀ ಸಂಸ್ಥೆಯ ಸದಸ್ಯರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅಭಿಪ್ರಾಯಿಸಿದರು.

ಪಟ್ಟಣದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಜೆಸಿಐ ಸೋಮವಾರ ಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ನಡೆಯುತ್ತಿದ್ದ ಜೇಸೀ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜೇಸೀ ಸಂಸ್ಥೆಯಿಂದ ನಾಯ ಕತ್ವದ ಗುಣಗಳನ್ನು ಅಳವಡಿಸಿ ಕೊಳ್ಳಬಹುದು. ಇದರೊಂದಿಗೆ ಸಮಾಜಸೇವಾ ಮನೋಭಾವವನ್ನು ರೂಢಿಸಿಕೊಳ್ಳಬಹುದು ಎಂದು ವಿಜಯ ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿ, ಉದ್ಯಮಿ ಕಿರಣ್ ಕೊತ್ನಳ್ಳಿ ಮಾತನಾಡಿ, ಇಲ್ಲಿನ ಜೇಸೀ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿರುವ ಸ್ಪರ್ಧೆ ಹಾಗೂ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಾಹಸಗಳಿಂದ ಕೂಡಿದ ಪ್ರತಿಭೆಗಳಿಗೆ ವೇದಿಕೆಯನ್ನು, ಪ್ರೇರಣೆಯನ್ನು ನೀಡುತ್ತಿದೆ. ಅದರಂತೆ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಓದಿಗೆ ತೋರುವ ಆಸಕ್ತಿಯನ್ನು ಅವರಲ್ಲಿ ಅಡಗಿರುವ ಕಲಾ ಪ್ರತಿಭೆಗಳಿಗೂ ನೀಡುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕೂಡಿಗೆ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷ ಹೆಚ್.ಎಸ್. ಮುದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಜೇಸೀ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ನೀಡಲಾಯಿತು. ಜೇಸೀ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜೇಸೀ ವಲಯ ಉಪಾಧ್ಯಕ್ಷ ದರ್ಶನ್, ಪ್ರಮುಖರಾದ ಶಿಲ್ಪಾ ಮಂಜುನಾಥ್, ಪುಷ್ಪಗಿರಿ ಜೇಸಿ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ರುಬೀನಾ, ಜೇಸೀರೇಟ್ ಅಧ್ಯಕ್ಷೆ ಮಾಯಾ ಗಿರೀಶ್, ನಿಕಟ ಪೂರ್ವಾಧ್ಯಕ್ಷ ಬಿ.ಎಸ್. ಮನೋಹರ್, ನಿಯೋಜಿತ ಅಧ್ಯಕ್ಷ ಪುರುಷೋತ್ತಮ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಮುಖರುಗಳಾದ ಜಯೇಶ್, ಉಷಾರಾಣಿ, ಮಂಜುಳಾ ಸುಬ್ರಮಣಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.