ಸುಂಟಿಕೊಪ್ಪ, ನ. 25: ಕೊಡಗಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಘಟಿಸಿದ ಮಹಾಜಲಪ್ರಳಯದಿಂದ ಹಲವರ ಬದುಕು ಮೂರಾಬಟ್ಟೆಯಾಗಿದೆ. ದನಕರುಗಳಿಗೂ ಆಹಾರಕ್ಕಾಗಿ ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ.

ಅತಿವೃಷ್ಟಿಯಿಂದ ಬೆಟ್ಟ ಬರೆ , ತೋಟ ಮನೆ ಮಠ ಕುಸಿದು ಬಿದ್ದಿದೆ ನದಿ ತೊರೆಗಳು ದಿಕ್ಕು ಬದಲಿಸಿದೆ ಕೆಲವೆಡೆ ಮನೆ ತೋಟದ ಕುರುಹು ಸಿಗದೆ ಊರಿನ ಚಿತ್ರಣವೇ ಬದಲಾಗಿದೆ.

ಹೊಳೆನದಿ ತೊರೆ ನಾಲೆಗಳಲ್ಲಿ ಮಣ್ಣುಮಿಶ್ರಿತ ನೀರು ಹರಿದಾಡಿದ್ದು, ಹಾರಂಗಿ ಜಲಾಶಯದ ಹಿನ್ನೀರಿನ ಹರದೂರು, ಗರಗಂದೂರು, ಯಡವಾರೆ, ಕಲ್ಲೂರು, ಮಳ್ಳೂರು, ಸಜ್ಜಳ್ಳಿ ಹಾರಂಗಿ ಪ್ರದೇಶದಲ್ಲಿ ನುಗ್ಗಿ ಬಂದಿದೆ. ಮಣ್ಣು ಮಿಶ್ರಿತ ನೀರು ಈಗ ಇಳಿಮುಖವಾಗಿದ್ದು, ನೀರು ಸೇರಿದ ಪ್ರದೇಶದಲ್ಲಿ ಕೆಂಪು ಮಣ್ಣೇ ಎಲ್ಲೆಡೆ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ಈ ಹಿಂದೆ ದನಕರುಗಳು ಎಮ್ಮೆ ಕೋಣಗಳು ಹುಲ್ಲನ್ನು ಮೇಯಲು ಬರುತ್ತಿದ್ದವು.

ಈಗ ಮಣ್ಣು ಆವರಿಸಿದ ಪ್ರದೇಶದಲ್ಲಿ ಹುಲ್ಲು ಕಾಣೆಯಾಗಿದೆ. ಜಾನುವಾರುಗಳು ಮೇವಿಗಾಗಿ ಪರದಾಡುವ ಸ್ಥಿತಿ ಬಂದಿದೆ.

ಪ್ರಕೃತಿ ವಿಕೋಪದಿಂದ ಸಾಕು ಪ್ರಾಣಿಗಳಿಗೂ ಸಂಕಟ ಬಂದೊದಗಿದ್ದು ಮಾತ್ರ ವಿಷಾದನೀಯವಾದುದು.