ಕುಶಾಲನಗರ, ನ. 25: ಜಲಪ್ರಳಯ ನಡೆದು 100 ದಿನಗಳು ಸಂದರೂ ಕುಶಾಲನಗರದ ಸಂತ್ರಸ್ತ ಜನತೆ ಮಾತ್ರ ಪ್ರಳಯದ ಹೊಡೆತದಿಂದ ಹೊರಬರಲು ಇನ್ನೂ ಸೆಣಸಾಡುತ್ತಿರುವ ದೃಶ್ಯ ಕಂಡುಬಂದಿದೆ. ಆಗಸ್ಟ್ ತಿಂಗಳಲ್ಲಿ ನಿರಂತರ ಮಳೆಯೊಂದಿಗೆ ಹಾರಂಗಿ ಜಲಾಶಯದ ಎಡವಟ್ಟಿನ ಮೂಲಕ ಕುಶಾಲನಗರ ಪಟ್ಟಣದ ಮತ್ತು ಸುತ್ತಮುತ್ತ ವ್ಯಾಪ್ತಿಯ ಗ್ರಾಮಗಳ 300 ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಿ ತೊಂದರೆಗೊಳಗಾದ ನಾಗರಿಕರು ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿರುವದು ವಾಸ್ತವ ಅಂಶವಾಗಿದೆ.

ಕುಶಾಲನಗರ ಪಟ್ಟಣದ ಬಡಾವಣೆಗಳಾದ ಬಸಪ್ಪ, ಸಾಯಿ, ಇಂದಿರಾ ಬಡಾವಣೆಗಳು ಮತ್ತು ದಂಡಿನಪೇಟೆಯ ಮತ್ತು ಸಮೀಪದ ಕುವೆಂಪು ಬಡಾವಣೆಗಳ ನೂರಾರು ಮನೆಗಳು ವಾರದ ಕಾಲ ನೀರಿನಿಂದ ಆವೃತಗೊಂಡಿತ್ತು. ಸಂಕಷ್ಟಕ್ಕೆ ಒಳಗಾದ ಜನರಿಗೆ ತಾತ್ಕಾಲಿಕ ಸಹಾಯಹಸ್ತ ದೊರಕಿದರೂ ನಂತರ ದೊರಕಬೇಕಾದ ಶಾಶ್ವತ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ. ಜಲಪ್ರಳಯದ ಸಂದರ್ಭ ರಾಜ್ಯ, ರಾಷ್ಟ್ರದ ನಾಯಕರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸರದಿ ಸಾಲಿನಲ್ಲಿ ಬಂದು ಹೋಗಿ ಭರವಸೆ ನೀಡಿದ್ದು ಮಾತ್ರ ನೆನಪಾಗಿ ಉಳಿದಿದೆ ಹೊರತು ಸಂಕಷ್ಟಕ್ಕೆ ಶಾಶ್ವತ ಪರಿಹಾರ ಇನ್ನೂ ತಲುಪಿಲ್ಲದಿರುವದು ದುರಂತ ಎನ್ನಬಹುದು.

ಕುಶಾಲನಗರದ ದಂಡಿನಪೇಟೆ ವ್ಯಾಪ್ತಿಯಲ್ಲಿ ಸುಮಾರು 13 ಮನೆಗಳು ಕುಸಿದು ಬಿದ್ದ ಸ್ಥಿತಿಯಲ್ಲೇ ಅಲ್ಪಸ್ವಲ್ಪ ರಿಪೇರಿ ಮಾಡಿಕೊಂಡು 13 ಕುಟುಂಬಗಳು ಅದರಲ್ಲಿ ದಿನದೂಡುತ್ತಿರುವದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಕಂಡುಬಂತು. ಇಲ್ಲಿನ ಸೈದಮ್ಮ, ರೆಹಮತ್‍ಬಿ ಮತ್ತಿತರ ಸಂತ್ರಸ್ತರು ಹೇಳುವಂತೆ ತಮ್ಮ ಕುಟುಂಬ ಇದೀಗ ಅತಂತ್ರ ಸ್ಥಿತಿ ಎದುರಿಸುತ್ತಿದೆ. ಕೇವಲ 3800 ರೂ.ಗಳ ಸಹಾಯಧನ ಒದಗಿದೆ ಹೊರತು ಉಳಿದಂತೆ ಎರಡನೇ ಕಂತಿನಲ್ಲಿ ದೊರಕಬೇಕಾದ ರೂ. 50 ಸಾವಿರ ಸಹಾಯಧನ ಇನ್ನೂ ತಮ್ಮ ಕೈಸೇರಿಲ್ಲ ಎನ್ನುತ್ತಾರೆ. ಸ್ಥಳೀಯ ದಾನಿಗಳು ನೀಡಿದ ಸಾಮಗ್ರಿಗಳ ಮೂಲಕ ತಮ್ಮ ಮನೆಯ ರಿಪೇರಿ ನಡೆಸಿ ಕುಟುಂಬ ಸದಸ್ಯರೊಂದಿಗೆ ಅತಂತ್ರ ಸ್ಥಿತಿಯಲ್ಲಿ ವಾಸ ಮಾಡುತ್ತಿರುವದು ಕಂಡುಬಂದಿದೆ.

ಈ ಬಗ್ಗೆ ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅವರು ಶಕ್ತಿಯೊಂದಿಗೆ ಪ್ರತಿಕ್ರಿಯಿಸಿ, ಪರಿಹಾರ ಕಾರ್ಯದ ಎಲ್ಲಾ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಎರಡನೇ ಕಂತಿನ ರೂ. 50 ಸಾವಿರ ಸಂತ್ರಸ್ತರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ರತ್ಯೇಕವಾಗಿ ಸಂತ್ರಸ್ತರಿಂದ ಮಾಹಿತಿ ಕಲೆಹಾಕಿದ್ದು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ದಂಡಿನಪೇಟೆಯ ಸಂತ್ರಸ್ತರ ಮನೆ ಕುಸಿದಿರುವ ಜಾಗದಲ್ಲಿ ವ್ಯಕ್ತಿಯೊಬ್ಬರು ತಕರಾರು ಎತ್ತಿದ್ದು ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದರೊಂದಿಗೆ ಬದಲಿಯಾಗಿ ಗುಂಡುರಾವ್ ಬಡಾವಣೆಯ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೂತನ ಮನೆ ಕಟ್ಟಿಕೊಡುವ ಯೋಜನೆಯೂ ಚಾಲನೆಯಲ್ಲಿದೆ ಎಂದಿದ್ದಾರೆ.

ಕುಶಾಲನಗರದ ಬಸಪ್ಪ ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ನಾಗರಿಕರು ಕೂಡ ಜಲಪ್ರಳಯದ ಹೊಡೆತದಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ಮನೆ ಮಾಲೀಕರು, ಬಾಡಿಗೆದಾರರು ಹಿಂದಿನ ಸ್ಥಿತಿಗೆ ಮರಳಲು ಇನ್ನೂ ಕಾಲವಕಾಶದ ಅಗತ್ಯತೆ ಇರುವದಾಗಿ ಅಲ್ಲಿನ ಜನರು ತಮ್ಮ ಅಳಲನ್ನು ‘ಶಕ್ತಿ’ಯೊಂದಿಗೆ ತೋಡಿಕೊಂಡಿದ್ದಾರೆ.

ಮಳೆಹಾನಿ ಸಂಬಂಧ ಸರಕಾರದಿಂದ ಬಂದ ಅನುದಾನದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಕೇವಲ 30 ಲಕ್ಷ ರೂ.ಗಳು ಮಾತ್ರ ದೊರೆತಿದ್ದು, ಇದರಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ ಸಾಯಿ ಬಡಾವಣೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಉಳಿದಂತೆ ಬಸಪ್ಪ ಬಡಾವಣೆ ಮತ್ತು ಬಾಪೂಜಿ ಬಡಾವಣೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುವದು ಎಂದು ಪ.ಪಂ. ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರ ತಂಡ ಕುಶಾಲನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಸಂದರ್ಭ ಸಂತ್ರಸ್ತರಿಗೆ ನೀಡಿದ ಭರವಸೆಗಳು ಮಾತ್ರ ಗಗನ ಕುಸುಮವಾಗಿದೆ ಎನ್ನುವದು ಇಲ್ಲಿನ ಸಂತ್ರಸ್ತರ ಅಳಲಾಗಿದೆ. ಉಳ್ಳವರು ಮಾತ್ರ ತಮ್ಮ ಮನೆಯನ್ನು ಪುನರ್ ನಿರ್ಮಿಸಿಕೊಂಡಿದ್ದರೆ ಇತ್ತ ಬಡ ಜನತೆ, ನಿವೃತ್ತ ನೌಕರರು, ಮಧ್ಯಮ ವರ್ಗದ ನಾಗರಿಕರು ಮಾತ್ರ ಯಾವದೇ ವರಮಾನವಿಲ್ಲದೆ ಆಕಾಶ ದಿಟ್ಟಿಸುವ ಪರಿಸ್ಥಿತಿ ಕುಶಾಲನಗರದಲ್ಲಿ ಸೃಷ್ಟಿಯಾಗಿದೆ.

ಇಷ್ಟೆಲ್ಲದರ ನಡುವೆ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಕೊಪ್ಪ ಗ್ರಾಮದಲ್ಲಿ ಸುಮಾರು 75 ಮನೆಗಳು ನೀರಿನಿಂದ ಮುಳುಗಿದ್ದು ಈ ಭಾಗದ ಸಂತ್ರಸ್ಥರಿಗೆ ಕನಿಷ್ಟ ಒಂದು ರೂಪಾಯಿ ಪರಿಹಾರ ಧನ ದೊರಕಿಲ್ಲ. ಕೊಡಗು ಜಿಲ್ಲೆಯ ಮೂಲಕ ಹರಿಯುವ ಕಾವೇರಿ, ಹಾರಂಗಿಯ ಎಡವಟ್ಟಿನಿಂದ ಈ ಮನೆಗಳು ನೀರಿನಲ್ಲಿ ಮುಳುಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದರೂ ಇವರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೌನ ವಹಿಸಿರುವದು ದುರಂತ. ಸಂಪೂರ್ಣ ಮನೆ ಕುಸಿತಕ್ಕೆ ಒಳಗಾದ 5 ಮಂದಿಗೆ ಮಾತ್ರ ಸರಕಾರದಿಂದ 95 ಸಾವಿರ ರೂ.ಗಳ ಚೆಕ್ ವಿತರಣೆಯಾಗಿದೆ ಎನ್ನುವದು ಸಮಾಧಾನಕರ ವಿಷಯ. -ಚಂದ್ರಮೋಹನ್