ಬೆಂಗಳೂರು, ನ. 25: ನಟ, ಮಾಜಿ ಕೇಂದ್ರ ಸಚಿವ ಅಂಬರೀಶ್ ಬೆನ್ನಲ್ಲೇ ಮತ್ತೋರ್ವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ರಾಜಕಾರಣಿ ಜಾಫರ್ ಷರೀಫ್ ಅವರು ವಿಧಿವಶರಾಗಿದ್ದಾರೆ. 85 ವರ್ಷದ ಜಾಫರ್ ಷರೀಫ್ ಅವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ನಗರದ ಕನ್ನಿಂಗ್ ಹ್ಯಾಮ್ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 1933ರಂದು ನವೆಂಬರ್ 3ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜಾಫರ್ ಷರೀಫ್ ಅವರು ಜನಿಸಿದ್ದರು. ಷರೀಫ್ ಅವರು ಪಿವಿ ನರಸಿಂಹರಾವ್ ಅವರ ಅಧಿಕಾರವಧಿಯಲ್ಲಿ 1991ರ ಜೂನ್ 21 ರಿಂದ 1995ರ ಅಕ್ಟೋಬರ್ 16ರವರೆಗೂ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಜಾಫರ್ ಷರೀಫ್ ಅವರು ಉರ್ದುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಅಜಾದ್ ನೆನಪಿನಾರ್ಥ ಇಂಡಿಯಾ ವಿನ್ಸ್ ಫ್ರೀಡಂ ಎಂಬ ಪುಸ್ತಕವನ್ನು ಬರೆದಿದ್ದು ಇದೇ ತಿಂಗಳ 28ರಂದು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.

ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ರೈಲ್ವೆಗೆ ಸಾಕಷ್ಟು ಅನುದಾನ ನೀಡಿದ್ದರು. ಇನ್ನು ಮೈಸೂರು ಮತ್ತು ಬೆಂಗಳೂರು ನಡುವೆ ಚಾಮುಂಡಿ ಎಕ್ಸ್ ಪ್ರೆಸ್ ಮತ್ತು ಟಿಪ್ಪು ಎಕ್ಸ್ ಪ್ರೆಸ್ ರೈಲು ಸಂಚರಿಸಲು ಸಾಕಷ್ಟು ಕೆಲಸ ಮಾಡಿದ್ದರು.