ಮಡಿಕೇರಿ, ನ. 25: ಇಲ್ಲಿನ ಕೆ. ನಿಡುಗಣೆ ಗ್ರಾಮದ ಗಾಲ್ಫ್ ಮೈದಾನದ ಅಂಚಿನಲ್ಲಿ ನೂತನವಾಗಿ ತಲೆಯೆತ್ತುತ್ತಿರುವ ಜಿಲ್ಲಾ ಪಂಚಾಯತ್ ಭವನದ ಕಾಮಗಾರಿ ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಸಂಬಂಧಿಸಿದ ಕಟ್ಟಡ ಕಾಮಗಾರಿಯ ಗುತ್ತಿಗೆ ಸಂಸ್ಥೆ ಬೆಂಗಳೂರಿನ ಗಾದಿರಾಜ್ ಕನ್ಸ್ಟ್ರಕ್ಷನ್ಸ್ ಪ್ರಮುಖರು ತಿಳಿಸಿದ್ದಾರೆ. ಕಟ್ಟಡ ಕಾಮಗಾರಿಯು 2014ರಿಂದ ನಡೆಯುತ್ತಿದ್ದು, ಇನ್ನು ಅಪೂರ್ಣ ಹಂತದಲ್ಲಿರುವ ಬಗ್ಗೆ ‘ಶಕ್ತಿ’ ಮಾಹಿತಿ ಬಯಸಿದಾಗ, ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ನಿರ್ದೇಶನದಂತೆ ಜಿಲ್ಲಾ ಪಂಚಾಯಿತಿ ಭವನದ ಕೆಲಸ ಸಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ನೂತನ ಜಿ.ಪಂ. ಭವನದ ಮೊದಲನೆಯ ಹಂತದ ಕಾಮಗಾರಿ ರೂ. 16 ಕೋಟಿ ವೆಚ್ಚದಲ್ಲಿ ಬಹುತೇಕ ಪೂರ್ಣಗೊಂಡಿದೆ ಎಂದು ಗುತ್ತಿಗೆದಾರರು ವಿವರಿಸಿದ್ದಾರೆ.ಅಲ್ಲದೆ ನೆಲ ಮಳಿಗೆ ಸಹಿತ ಎರಡು ಅಂತಸ್ತು ಕಟ್ಟಡ ಕೆಲಸ ಮುಂದುವರಿದಿದ್ದು, ಜಿ.ಪಂ. ಆಡಳಿತ ಕಚೇರಿಗಳೊಂದಿಗೆ ಜನಪ್ರತಿನಿಧಿಗಳು ಸಭೆಗಳನ್ನು

(ಮೊದಲ ಪುಟದಿಂದ) ನಡೆಸಲು ವಿಶಾಲ ಕಲಾಪ ಸಭಾಂಗಣದೊಂದಿಗೆ ಇತರ ಮೂಲಭೂತ ಸೌಕರ್ಯಗಳನ್ನು ಈ ನೂತನ ಸಂಕೀರ್ಣದಲ್ಲಿ ಪೂರೈಸಲಾಗುತ್ತಿದೆ. ಈ ದಿಸೆಯಲ್ಲಿ 2ನೇ ಹಂತದ ಕಾಮಗಾರಿಯು ರೂ. 7 ಕೋಟಿ ವೆಚ್ಚದೊಂದಿಗೆ ಸಾಗಿದೆ. ಒಟ್ಟು ಸುಮಾರು 23ರಿಂದ 25 ಕೋಟಿ ತನಕ ನೂತನ ಭವನಕ್ಕೆ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ನಾಲ್ಕು ತಿಂಗಳು ನಿರಂತರ ಸುರಿದ ಮಳೆಯಿಂದಾಗಿ ಕೆಲಸ ನಿಧಾನಗೊಂಡು ಈ ನಾಲ್ಕು ತಿಂಗಳು ಕೆಲಸನಿರ್ವಹಿಸಲು ತೊಡಕಾಗಿದ್ದಾಗಿ ಮಾಹಿತಿ ನೀಡಿದ ಅಲ್ಲಿನ ಮೇಲ್ವಿಚಾರಕರು, ಹಿಂದಿನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಸಲಹೆಯಂತೆ ಜಿ.ಪಂ. ಭವನಕ್ಕೆ ಆಗಮಿಸುವ ಮತ್ತು ಹೊರಹೋಗುವ ದ್ವಾರವನ್ನು ದ್ವಿಪಥದಿಂದ ರೂಪಿಸಲಾಗುವದು ಎಂದು ಸುಳಿವು ನೀಡಿದರು.

ಕಾಮಗಾರಿಗೆ ತೊಡಕು: ಒಂದೆಡೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದರೂ, ಇನ್ನೊಂದೆಡೆ ಭವನದ ಮುಂಭಾಗದಲ್ಲಿ ಸುಸಜ್ಜಿತ ಸಂಪರ್ಕ ಮಾರ್ಗ, ತಡೆಗೋಡೆ, ಚರಂಡಿ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಜಾಗದ ತೊಡಕಾಗಿದೆ ಎಂದು ಬೊಟ್ಟು ಮಾಡಿದರು.

ಜಿಲ್ಲಾ ಪಂಚಾಯತ್ ಪ್ರವೇಶ ದ್ವಾರದ ಸಂಕೀರ್ಣ ಬಳಿ ಈ ಹಿಂದೆ ಕೆಲವು ಮನೆಗಳನ್ನು ಜಿಲ್ಲಾಡಳಿತ ಬಲವಂತವಾಗಿ ತೆರವುಗೊಳಿಸಿ ಇಂದಿನ ಕಟ್ಟಡ ನಿರ್ಮಿಸುತ್ತಿರುವದಾಗಿದೆ. ಹೀಗಿದ್ದರೂ, ಮುಖ್ಯ ದ್ವಾರದೊಂದಿಗೆ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಜಲಾನಯನ ಇಲಾಖೆಯ ತಾತ್ಕಾಲಿಕ ಕಟ್ಟಡವೊಂದರ ಸಹಿತ ಇತರ ಮೂರು ಮನೆಗಳನ್ನು ತೆರವುಗೊಳಿಸಿರುವದಿಲ್ಲ.

ಪಕ್ಕದಲ್ಲಿ ಅಂಗನವಾಡಿ ಕಟ್ಟಡವೊಂದು ಇದ್ದು, ಈ ಎಲ್ಲವನ್ನು ತೆರವುಗೊಳಿಸದ ಹೊರತು, ನೂತನ ಜಿ.ಪಂ. ಸಂಕೀರ್ಣಕ್ಕೆ ಆವರಣಗೋಡೆಯೊಂದಿಗೆ ದ್ವಾರ ನಿರ್ಮಾಣ, ಸಂಪರ್ಕ ರಸ್ತೆ ಕಲ್ಪಿಸಲು ಸಮಸ್ಯೆ ಎದುರಾಗಿದೆ.

ಆ ದಿಸೆಯಲ್ಲಿ ಜಿ.ಪಂ. ಆಡಳಿತ ಹಾಗೂ ಕಂದಾಯ ಇಲಾಖೆ ತುರ್ತು ಗಮನಹರಿಸಿ ಕ್ರಮ ಜರುಗಿಸಿದರೆ, ಕಾಮಗಾರಿ ಚುರುಕುಗೊಂಡು ಬೇಗನೆ ಕೆಲಸ ಮುಗಿಯಲಿದೆ ಎಂಬ ಆಶಯವನ್ನು ಗುತ್ತಿಗೆ ಸಂಸ್ಥೆ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.