ಕೂಡಿಗೆ, ನ. 25: ಶಿರಂಗಾಲ ಗ್ರಾ.ಪಂ. ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಎಸ್.ಎನ್. ರಮೇಶ್ ಮಾತನಾಡಿ, ಮಕ್ಕಳ ಗ್ರಾಮ ಸಭೆಯು ಮಕ್ಕಳಿಗೆ ಪೂರಕವಾದ ವಿಷಯಗಳನ್ನು ಒಳಗೊಂಡಿರುತ್ತದೆ. ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಆರೋಗ್ಯಕರ ಬೆಳೆವಣಿಗೆ, ಹೆಣ್ಣು ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಬಗ್ಗೆ ಹೆಚ್ಚು ಗೌರವ ತೋರುವದನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.

ಈ ಸಂದರ್ಭ ಶಾಲಾ ವಿದ್ಯಾರ್ಥಿ ಮಿಥುನ್ ಅಧ್ಯಕ್ಷರೊಂದಿಗೆ ಮಾತನಾಡಿ, ನಮ್ಮ ಶಾಲೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ತಡೆಗೋಡೆಯನ್ನು ನಿರ್ಮಿಸಬೇಕು. ಶಾಲಾ ಸಮಯದ ನಂತರ ಕಿಡಿಗೇಡಿಗಳು ಶಾಲಾ ಆವರಣದಲ್ಲಿ ಮದ್ಯಪಾನ ಮತ್ತು ಇತ್ಯಾದಿ ಬೇಡದ ಚಟುವಟಿಕೆಗಳನ್ನು ನಡೆಸಿ ಶಾಲಾ ಆವರಣವನ್ನು ಹಾಳು ಮಾಡುತ್ತಿದ್ದಾರೆ. ತಾವುಗಳು ಪೆÇಲೀಸರಿಗೆ ದೂರು ನೀಡಿ ಸಂಜೆ ಸಮಯ ಬೀಟ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಡಿ. ಹರೀಶ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ನವೆಂಬರ್ ತಿಂಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮಸಭೆಯನ್ನು ನಡೆಸುತ್ತಿದ್ದು, ಮಕ್ಕಳ ಹಕ್ಕುಗಳ ಬಗ್ಗೆ ವಿಚಾರ ಮಂಡಿಸಿ, ಮಕ್ಕಳ ಸಮಸ್ಯೆಗಳನ್ನು ಆಲಿಸಲಾಗಿದೆ. ಇವುಗಳ ಬಗ್ಗೆ ಮುಂದಿನ ಮಾಸಿಕ ಸಭೆಯಲ್ಲಿ ವಿಶೇಷವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಲಾಗುವದು ಎಂದರು. ವಿಶ್ವ ಶೌಚಾಲಯ ದಿನದ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಏಳನೇ ತರಗತಿಯ ಐಶು ವಹಿಸಿದ್ದರು.

ಉಪಾಧ್ಯಕ್ಷೆ ಪೂರ್ಣಿಮ, ಶಾಲಾ ಮುಖ್ಯೋಪಾಧ್ಯಾಯ ವಸಂತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ವತ್ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.