ಮಡಿಕೇರಿ, ನ. 25: ಮರಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಹುತ್ತರಿ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನೆಹರು ಎಫ್‍ಸಿ ಪಾಲಿಬೆಟ್ಟ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಅಮ್ಮತ್ತಿ ಮಿಲನ್ಸ್ ತಂಡವನ್ನು 3-0 ಗೋಲುಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ನೆಹರು ತಂಡದ ಪರವಾಗಿ ಗಣೇಶ್ ಮತ್ತು ಕಿರಣ್ ಗೋಲು ಗಳಿಸಿ ಜಯದ ರೂವಾರಿಗಳಾದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಆಟಗಾರರನ್ನು ಹೊಂದಿದ್ದ ಎರಡೂ ತಂಡಗಳು (ಮೊದಲ ಪುಟದಿಂದ) ರೋಚಕ ಹೋರಾಟ ನಡೆಸಿದವು. ಆದರೆ ನಿಖರವಾದ ಪಾಸ್‍ಗಳ ಮೂಲಕ ಆಡಿದ ನೆಹರೂ ತಂಡಕ್ಕೆ ಅಂತಿಮವಾಗಿ ವಿಜಯಲಕ್ಷ್ಮಿ ಒಲಿಯಿತು. ಈ ತಂಡ ಆಕರ್ಷಕ ಟ್ರೋಫಿಯೊಂದಿಗೆ 22,222 ರೂಪಾಯಿ ನಗದು ಬಹುಮಾನವನ್ನೂ ಪಡೆದುಕೊಂಡಿತು.

ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮಿಲನ್ಸ್ ಅಮ್ಮತ್ತಿ ತಂಡ ಆಕರ್ಷಕ ಟ್ರೋಫಿ ಮತ್ತು 11,111 ರೂಪಾಯಿಗಳನ್ನು ಪಡೆದುಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಮಿಲನ್ಸ್ ಅಮ್ಮತ್ತಿ ತಂಡ ಗುಡ್ಡೆಹೊಸೂರಿನ ಐಎನ್‍ಎಸ್ ತಂಡಗಳ ನಡುವಣ ರೋಚಕ ಹೋರಾಟ 2-2 ಗೋಲುಗಳಿಂದ ಸಮಬಲವಾಯಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‍ನಲ್ಲಿ ಅಮ್ಮತ್ತಿ ತಂಡ 4-2 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿ ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿತು. ಇನ್ನೊಂದೆಡೆ ನೆಹರೂ ಎಫ್ಸಿ ತಂಡ, ಹಾಲುಗುಂದ ತಂಡದ ವಿರುದ್ಧ 5-0 ಗೋಲುಗಳಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತು.

ಸರಣಿಯ ಅತ್ಯುತ್ತಮ ತಂಡವಾಗಿ ಭಗವತಿ ಎಫ್ಸಿ ಹಾಲುಗುಂದ ಪ್ರಶಸ್ತಿ ಪಡೆದರೆ, ಐಎನ್‍ಎಸ್ ತಂಡದ ದಿವಾಕರ್ 6 ಗೋಲು ಬಾರಿಸಿ ಅತ್ಯಧಿಕ ಸ್ಕೋರರ್ ಪ್ರಶಸ್ತಿ ಪಡೆದರು. ನೆಹರು ಎಫ್‍ಸಿ ತಂಡದ ಮಣಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ನೆಹರು ಎಫ್‍ಸಿ ತಂಡದ ನೌಸಿಫ್ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದುಕೊಂಡರು.

ಮಹಿಳಾ ಪಂದ್ಯದಲ್ಲಿ ಗೋಣಿಕೊಪ್ಪ ತಂಡಕ್ಕೆ ಜಯ

ಫೈನಲ್ ಪಂದ್ಯಕ್ಕೂ ಮೊದಲು ಲಯನ್ಸ್ ವುಮೆನ್ಸ್ ಫುಟ್ಬಾಲ್ ಕ್ಲಬ್ ಗೋಣಿಕೊಪ್ಪ ಮತ್ತು ಕೂರ್ಗ್ ವುಮೆನ್ಸ್ ಫುಟ್ಬಾಲ್ ಕ್ಲಬ್ ತಂಡಗಳ ಮಧ್ಯೆ ಪ್ರದರ್ಶನ ಪಂದ್ಯ ನಡೆಯಿತು. ಇದರಲ್ಲಿ ಗೋಣಿಕೊಪ್ಪ ತಂಡ 3-1 ಗೋಲುಗಳಿಂದ ಜಯಗಳಿಸಿತು.

ಈ ಮಧ್ಯೆ ಟ್ರೋಫಿಗಳಿಗೆ ನಿವೃತ್ತ ಯೋಧ ಐಮಂಡ ನಾಣಯ್ಯ ಹುತ್ತರಿ ಹಬ್ಬದ ಕದಿರು ಕಟ್ಟುವ ಮೂಲಕ ಪಂದ್ಯಾವಳಿಗೆ ವಿಶೇಷ ಮೆರುಗು ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವೈಷ್ಣವಿ ಏಫ್ಸಿ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಪ್ರತಿಭಾವಂತ ಆಟಗಾರರಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಪಂದ್ಯಾವಳಿಗಳನ್ನು ಆಯೋಜಿಸುವದಾಗಿ ನುಡಿದರು. ಉಳಿದಂತೆ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆದಂಬಾಡಿ ಚಂದ್ರಕಲಾ, ಮರಗೋಡು ಸ್ಪೋಟ್ರ್ಸ್ ಆಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್, ಅಫರ್ಡೇಬಲ್ ಕಾರ್ ಆಕ್ಸಸರೀಸ್ ಮಾಲೀಕ ಅಬ್ದುಲ್ ಹಕೀಂ, ಮರಗೋಡು ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶಿವು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.