ನಾಪೆÇೀಕ್ಲು, ನ. 26: ನಮ್ಮ ಭೂ ರಾಜಕೀಯ ನೆಲೆಯನ್ನು ನಮಗೆ ಬಿಟ್ಟುಬಿಡಿ. ನಮ್ಮ ತಾಯ್ನಾಡನ್ನು ನಾವೇ ಪುನರ್ ನಿರ್ಮಿಸಿಕೊಳ್ಳುತ್ತೇವೆ ಎಂಬ ಘೋಷಣೆಯ ಮೂಲಕ ಕೊಡಗಿನಾದ್ಯಂತ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಕಕ್ಕಬ್ಬೆಯಲ್ಲಿ ಸಿಎನ್‍ಸಿಯಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಜಲ ಸ್ಫೋಟ, ವಿಪತ್ತು ನಡೆದು ಮೂರು ತಿಂಗಳಾಗುತ್ತಾ ಬಂದರೂ ಕಷ್ಟದಲ್ಲಿ ಸಿಲುಕಿದವರ ಬದುಕು ಇನ್ನೂ ಅಂದಕಾಲದ ಕಾರ್ಮೋಡದಲ್ಲಿಯೇ ಮುಚ್ಚಿ ಹೋಗಿದೆ. ಆ ಕಾರ್ಮೋಡ ವನ್ನು ನೀಗಿಸುವ ಬದಲು ತಾತ್ಕಾಲಿಕ ಪರಿಹಾರ ವಿತರಣೆ ಮತ್ತು ಶಾಶ್ವತ ಪುನರ್ ವಸತಿ ವಿಚಾರದಲ್ಲಿ ಕಪಟ ನಾಟಕಗಳು, ವಂಚನೆಗಳು ನಡೆಯುತ್ತಿದೆ. ಪರಿಹಾರದ ಹೆಸರಿನಲ್ಲಿ ಭ್ರಷ್ಟಾಚಾರದ ಹೊಳೆ ಹರಿದಿದೆ. ವಿವಿಧೆಡೆಗಳಿಂದ ದಾನಿಗಳು, ಕೊಡಗಿನಲ್ಲಿ ನಡೆದ ಜಲ ಸ್ಫೋಟ ಮತ್ತು ಭೂ ಸ್ಫೋಟ ಸಂತ್ರಸ್ತರ ಹೆಸರಿನಲ್ಲಿ ಸುಮಾರು 5 ಸಾವಿರ ಕೋಟಿ ರೂ. ಹಣ ಮತ್ತು ಪರಿಹಾರ ಸಾಮಗ್ರಿಯನ್ನು ಸರಕಾರ ಮತ್ತು ಕಾಳ ಸಂತೆಕೋರರ ಅಪವಿತ್ರ ಮೈತ್ರಿ ಹಗಲು ದರೋಡೆ ನಡೆಸಿದೆ. ಇದರಿಂದ ಸಂತ್ರಸ್ತರು ಬೀದಿ ಪಾಲಾಗಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಜಲ ಸ್ಫೋಟ, ವಿಪತ್ತು ಸಂತ್ರಸ್ತರನ್ನು ಸಂಕಷ್ಟದಿಂದ ಪಾರು ಮಾಡಿ ಶಾಶ್ವತ ನೆಮ್ಮದಿ, ಸುಖ ಮತ್ತು ಭದ್ರತೆಯ ಬದುಕು ನೀಡಲು ಈ ಕೆಳಗಿನ ನಿರ್ಣಯಗಳನ್ನು ಮಂಡಿಸಲಾಯಿತು.

ವಾಯುವ್ಯ ಕೊಡಗಿನ ಏಳು ನಾಡುಗಳನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಶಾಶ್ವತ ಪುನರ್ ವಸತಿ ಕಾರ್ಯದ ಕುರಿತು ನೀಲ ನಕ್ಷೆ ಬಿಡುಗಡೆ ಗೊಳಿಸಬೇಕು. ಹಣ ಪರಿಹಾರ ನಿಧಿಯ ವೆಚ್ಚದ ಕುರಿತು ಶ್ವೇತ ಪ್ರತ ಹೊರಡಿಸಬೇಕು. ವಿಪತ್ತಿಗೆ ಮೂಲ ಕಾರಣವಾದ ಹಾರಂಗಿ ಜಲಾಶಯವನ್ನು ಕೂಡಲೇ ಕೆಡವಬೇಕು, ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಾಚಮಂಡ ರಾಜಾ ಪೂವಣ್ಣ ಮಾತನಾಡಿದರು. ಬೊಳಿಯಾಡಿರ ಸಂತು ಸುಬ್ರಮಣಿ ಸ್ವಾಗತಿಸಿ, ಅರೆಯಡ ಗಿರೀಶ್ ವಂದಿಸಿದರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಕ್ಕಬ್ಬೆ ವ್ಯಾಪ್ತಿಯ ಹೆಚ್ಚಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.