ವೀರಾಜಪೇಟೆ, ನ. 26: ಭಕ್ತಿಯ ಸಾರದಿಂದ ಮುಕ್ತಿಮೋಕ್ಷ ಸಾಧನೆಗೆ ಸೋಪಾನವೆಂಬಂತೆ ಆಧ್ಯಾತ್ಮ ಚಿಂತನೆಯಿಂದ ಶರೀರದ ನರ ನಾಡಿಗಳಲ್ಲಿ ಹೊಸ ಚೇತನವು ಜಾಗೃತವಾಗುತ್ತದೆ ಎಂದು ಅಮ್ಮ ಭಗವಾನ್ ಅವರ ಅಶರೀರವಾಣಿಯು ಭಕ್ತಜನರಿಗೆ ತಮ್ಮ ಅಭಯಹಸ್ತದ ಮೂಲಕ ಆಶೀರ್ವಚನ ನೀಡಿದರು.

ಗೋಣಿಕೊಪ್ಪಲುವಿನ ಉಮಾ ಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕಲ್ಕಿ ಭಗವಾನ್ ಭಕ್ತ ವೃಂದ ಆಯೋಜಿಸಲಾಗಿದ್ದ ಮುಕ್ತಿ ಮೋಕ್ಷ ಯಾಗದಲ್ಲಿ ನೇರ ಆಶೀರ್ವಚನದಲ್ಲಿ ಅಮ್ಮ ಭಗವಾನ್; ಯಾವ ಭಕ್ತನು ಒಂದು ಬಾರಿ ಅಥವಾ ಹಲವಾರು ಬಾರಿ ಅತ್ಯಂತ ತನ್ಮಯನಾಗಿ, ಪರಮಾನಂದಭಾವ ದಿಂದ ಮೈಮರೆತು ಸ್ವತಃ ಪ್ರಾರ್ಥನೆಯಲ್ಲಿ ತೊಡಗುತ್ತಾನೊ ಆತ ಮೋಕ್ಷದ ಮಾರ್ಗದಲ್ಲಿ ನಡೆಯುವಂತೆ, ತನ್ನ ಅಲೌಕಿಕ ಚಿಂತನೆಗಳನ್ನು ಬದಿಗೊತ್ತಿ ಆಧ್ಯಾತ್ಮಿಕ ಕೇಂದ್ರದಲ್ಲಿ ತನ್ನ ಮನಸ್ಸು ಕೇಂದ್ರಿಕೃತಗೊಂಡಾಗ ಪರಿಪೂರ್ಣ ಚಿಂತನೆಯು ಜಾಗೃತಗೊಳ್ಳುತ್ತದೆ ಎಂದರು. ಭಕ್ತಿಯಿಂದ ದೇವರ ನಾಮದಲ್ಲಿ ತಲ್ಲೀನನಾಗುತ್ತಾನೊ ಆತ ಅಂತಿಮಯಾತ್ರೆ ಕ್ರಮಿಸುವ ಮಾರ್ಗಕ್ಕೆ ಮುಕ್ತಿ ಲಭಿಸಿ ಮೋಕ್ಷದ ಪ್ರತಿಫಲ ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮೊದಲಿಗೆ ಭಕ್ತವೃಂದದಿಂದ ಪೂರ್ಣಕಳಶ ದೊಂದಿಗೆ ಹೋಮ ಮತ್ತು ಪೂಜಾ ಕೈಂಕರ್ಯಗಳು ನಡೆದವು. ಅಸಂಖ್ಯಾತ ಭಕ್ತ ಸಮೂಹವು ಆಗಮಿಸಿ ಆಶೀರ್ವಚನ ಪಡೆದರು.