ಸೋಮವಾರಪೇಟೆ,ನ.26: ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ಕಲೆಗಳ ಬಗ್ಗೆ ಅಭಿರುಚಿ ಮೂಡಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2ನೇ ವರ್ಷದ ಮಕ್ಕಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಡಿಸೆಂಬರ್ 8ರಂದು ಕೊಡ್ಲಿಪೇಟೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದ್ದಾರೆ.ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.8ರಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಶಾಲಾ ಆವರಣದಲ್ಲಿರುವ ಶ್ರೀಮತಿ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದಲ್ಲಿ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕಸಾಪ 2ನೇ ವರ್ಷದ ಮಕ್ಕಳ ಸಮ್ಮೇಳನ ಆಯೋಜಿಸಿದ್ದು, ಬೆಸೂರಿನ ಕೃತಜ್ಞ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಎಲ್ಲಾ ಕಾರ್ಯಕ್ರಮಗಳನ್ನು ಮಕ್ಕಳೇ ನಿರ್ವಹಿಸಲಿದ್ದಾರೆ. ಕಸಾಪ ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದರು.

ಡಿ.8ರಂದು ಪೂರ್ವಾಹ್ನ 8.30ಕ್ಕೆ ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಲಿದೆ. 9 ಗಂಟೆಗೆ ಗಣಪತಿ ದೇವಾಲಯದಿಂದ ಮಂಗಳವಾದ್ಯ, ಪೂರ್ಣಕುಂಭ, ವೈವಿಧ್ಯಮಯ ಕಲಾತಂಡಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಯೋಗದೊಂದಿಗೆ ಸಮ್ಮೇಳ ನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದ ಅಂಗವಾಗಿ ಎರಡು ದ್ವಾರಗಳನ್ನು ನಿರ್ಮಿಸಲಾಗುವದು. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಗೂ ಸುದ್ದಿಮನೆ ತೆರೆಯಲಾಗುವದು. ಕಾರ್ಯಕ್ರಮ ನಡೆಯುವ ಪ್ರಧಾನ ವೇದಿಕೆಗೆ ಜಂಗಮರ ಲಿಂಗೈಕ್ಯ ಎಸ್.ಎಸ್. ನೇಮಿರಾಜ್ ಹೆಸರಿಡಲಾಗಿದ್ದು, ಸಮ್ಮೇಳನದ ವಿವಿಧ ಕಾರ್ಯಕ್ರಮಗಳು ಇದೇ ವೇದಿಕೆಯಲ್ಲಿ ನಡೆಯಲಿವೆ ಎಂದು ಲೋಕೇಶ್ ಸಾಗರ್ ತಿಳಿಸಿದರು.

ಅಂದು ಪೂರ್ವಾಹ್ನ 11 ಗಂಟೆಗೆ ಎಸ್‍ಜಿಎಸ್ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕು. ಸಿಂಚನ ವಹಿಸಲಿದ್ದಾರೆ.