ಮಡಿಕೇರಿ,ನ.26: ಮಡಿಕೇರಿಯ ಹೊಟೇಲ್ ಒಂದರಲ್ಲಿ ಸಿಬ್ಬಂದಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಯುವಕನೋರ್ವನ ಶ್ರಮ ಮತ್ತು ಛಲಕ್ಕೆ ಪ್ರತಿಫಲ ಎಂಬಂತೆ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿಯು ದೊರಕಿದೆ.

ಮಡಿಕೇರಿಯ ಸುರಭಿ ರೆಸ್ಟೋರೆಂಟ್‍ನಲ್ಲಿ ಸಿಬ್ಬಂದಿ ಯಾಗಿರುವ ಕುಂದಾಪುರ ಮೂಲದ ಗಣೇಶ್ ಕೆ.ಪೂಜಾರಿ ಮಂಗಳೂರಿನಲ್ಲಿ ನಡೆದ ‘ಮಿಸ್ಟರ್ ಮಂಗಳೂರು’ ದೇಹದಾಢ್ರ್ಯ ಸ್ಪರ್ಧೆಯಲ್ಲಿ ನ್ಯಾಚುರಲ್ ಬಾಡಿ ಬಿಲ್ಡರ್ ವಿಭಾಗದಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಮುಂದಿನ ವರ್ಷ ನವೆಂಬರ್‍ನಲ್ಲಿ ನಡೆಯಲಿರುವ ಮಿಸ್ಟರ್ ಇಂಡಿಯಾ ದೇಹದಾಢ್ರ್ಯ ಸ್ಪರ್ಧೆಯ ನ್ಯಾಚುರಲ್ ಬಾಡಿ ಬಿಲ್ಡರ್ -2019 ರ ವಿಭಾಗದಲ್ಲಿ ಪಾಲ್ಗೊಳ್ಳಲು ಇದೀಗ ಗಣೇಶ್ ಅರ್ಹತೆ ಪಡೆದಿದ್ದಾರೆ. ಕಳೆದ ವರ್ಷವೂ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಿಸ್ಟರ್ ದಕ್ಷಿಣ ಕನ್ನಡ ಪ್ರಶಸ್ತಿಗೆ ಪಾತ್ರರಾಗಿದ್ದ 24 ವರ್ಷದ ಗಣೇಶ್ ಪೂಜಾರಿಗೆ ಈವರೆಗೆ 2 ಚಿನ್ನ ಮತ್ತು 1 ಬೆಳ್ಳಿ ಪದಕ ದೊರಕಿದೆ. ಚಿಕ್ಕಂದಿನಲ್ಲಿಯೇ ದೇಹದಾಢ್ರ್ಯದ ಬಗ್ಗೆ ಒಲವು ಹೊಂದಿದ್ದ ಗಣೇಶ್ ಮನೆ ಪಕ್ಕದಲ್ಲಿದ್ದ ಮಂಜು ಎಂಬವರ ದೈಹಿಕ ಕಸರತ್ತು ಗಮನಿಸಿ ಅವರಲ್ಲಿ ಪ್ರಾರಂಭಿಕ ತರಬೇತಿ ಪಡೆದುಕೊಂಡಿದ್ದರು.

ತನ್ನ ಗೆಳೆಯ ನಿಶಾನ್ ಮಿಸ್ಟರ್ ಯೂನಿವರ್ಸ್ ಪ್ರಶಸ್ತಿ ಪಡೆದಿದ್ದ ತನ್ನ ಗೆಳೆಯ ನಿಶಾನ್ ನಯಾ ಪೈಸೆ ಸಂಭಾವನೆ ಪಡೆಯದೇ ತನಗೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದು, ಇದೀಗ 6 ವರ್ಷಗಳಿಂದ ಮಡಿಕೇರಿಯ ದೈಹಿಕ ತರಬೇತುದಾರ ಪ್ರದೀಪ್ ಅವರಲ್ಲಿ ತರಬೇತಿ ಪಡೆಯುತ್ತಿರುವದಾಗಿ ಹೇಳಿದ ಗಣೇಶ್ ತನ್ನ ಸಾಧನೆಯಲ್ಲಿ ಪ್ರದೀಪ್ ಸಾಧನೆ ಅತ್ಯಂತ ಮಹತ್ವದ್ದಾಗಿದೆ ಎಂದು ಸ್ಮರಿಸಿಕೊಂಡರು.

ದಿನಕ್ಕೆ 12 ಮೊಟ್ಟೆ, ಮುಕ್ಕಾಲು ಕೆಜಿ ಚಿಕನ್, 1 ಕೆಜಿ ಯಷ್ಟು ಹಣ್ಣು, ಡ್ರೈಪ್ರೂಟ್ಸ್ , ಮೊಳಕೆ ಕಾಳುಗಳನ್ನು ಸೇವಿಸುವ ಮೂಲಕ ದೇಹದಾಢ್ರ್ಯತೆ ಕಾಪಾಡಿಕೊಂಡಿರುವ ಗಣೇಶ್ ಯಾವದೇ ಔಷಧಿ, ಚುಚ್ಚುಮದ್ದು, ಮಾತ್ರೆಗಳನ್ನು ಅವಲಂಭಿಸದೇ ನೈಸರ್ಗಿಕವಾಗಿ ದೇಹ ಕಾಪಾಡಿಕೊಂಡಿದ್ದಾರೆ.

7 ನೇ ತರಗತಿ ವ್ಯಾಸಂಗದ ಬಳಿಕ ಶಾಲಾ ಮೆಟ್ಟಿಲು ಹತ್ತದೆ ತಾಯಿ, ತಮ್ಮನನ್ನು ಸಲಹುವ ದೃಷ್ಟಿಯಿಂದ ಹೊಟೇಲ್ ಕೆಲಸಕ್ಕೆ ಸೇರಿದ ಗಣೇಶ್ ಪೂಜಾರಿ, ಮಡಿಕೇರಿಯ ಸುರಭಿ ರೆಸ್ಟೋರೆಂಟ್ ನ ಮಾಲೀಕ ಜಯಂತ್ ನೀಡಿರುವ ನೆರವನ್ನು ಸ್ಮರಿಸಿಕೊಳ್ಳುತ್ತಾರೆ. ಯಾವದೇ ಸ್ಪರ್ಧೆಯಿದ್ದರೂ ನನ್ನನ್ನು ಆರ್ಥಿಕವಾಗಿ ಬೆಂಬಲಿಸಿ ಧೈರ್ಯ ತುಂಬುತ್ತಿರುವ ಜಯಂತ್ ಅವರ ಮಾರ್ಗದರ್ಶನದಿಂದಾಗಿಯೇ ಹೊಟೇಲ್‍ನಲ್ಲಿಯೂ ಕೆಲಸ ಮಾಡುತ್ತಾ ದೇಹದಾಢ್ರ್ಯತೆಯ ತರಬೇತಿಯನ್ನೂ ಪಡೆಯಲು ಸಾಧ್ಯವಾಯಿತು ಎಂದು ಗಣೇಶ್ ಹೇಳಿದರು