ಮಡಿಕೇರಿ, ನ.26 : ರಾಷ್ಟ್ರದ ಸಂವಿಧಾನ ಕಾನೂನು ಪುಸ್ತಕವಿದ್ದಂತೆ, ಜೊತೆಗೆ ಅದೊಂದು ಮಹಾಗ್ರಂಥ ಎಂಬುದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ವಿಜಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ದೇಶದ ಸಂವಿಧಾನ ಓದಿದರು ಯಾವದೇ ರೀತಿಯ (ಮೊದಲ ಪುಟದಿಂದ) ತಪ್ಪು ಮಾಡಲು ಹೋಗುವುದಿಲ್ಲ, ಅಪರಾಧ ಮಾಡಲು ಮನಸ್ಸು ಬರುವದಿಲ್ಲ, ಆದ್ದರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾದೀಶರಾದ ವಿಜಯಕುಮಾರ್ ಕರೆ ನೀಡಿದರು.

ಹಲವು ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ, ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ಇದರ ಪ್ರಯೋಜನ ಎಲ್ಲರಿಗೂ ದೊರೆಯಬೇಕು. ಆ ನಿಟ್ಟಿನಲ್ಲಿ ಸಂವಿಧಾನದ ಮೂಲಭೂತ ಹಕ್ಕು ಪಡೆಯುವದರ ಜೊತೆಗೆ, ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಧೀಶರಾದ ವಿಜಯಕುಮಾರ್ ಸಲಹೆ ಮಾಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಮಾತನಾಡಿ ನವೆಂಬರ್ 11, 1949 ರಂದು ಸಂವಿಧಾನವನ್ನು ಸ್ವೀಕರಿಸಲಾಯಿತು, ನಂತರ ಜನವರಿ 26, 1951 ರಿಂದ ಗಣರಾಜ್ಯ ದಿನಾಚರಣೆ ಆಚರಿಸಿ ಕೊಂಡು ಬರಲಾಗುತ್ತಿದೆ ಎಂದರು.

ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಅವಕಾಶ ನೀಡಿದೆ. ಸಮಾನತೆ, ಸಹೋದರತ್ವ, ಸಹಬಾಳ್ವೆ ಈ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಮಹತ್ವ ತಿಳಿಯುವಂತಾಗಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಹಾಗಾದಾಗ ಬಲಿಷ್ಠ ರಾಷ್ಟ್ರ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಬಿ.ಕೆ.ಮನು ಇತರರು ಇದ್ದರು. ಚಿತ್ರನಟ ಹಾಗೂ ಮಾಜಿ ಸಚಿವರಾದ ಅಂಬರೀಷ್ ಮತ್ತು ಕೇಂದ್ರ ರೈಲ್ವೆ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್ ನಿಧನ ಹಿನ್ನೆಲೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂವಿಧಾನ ಓದಿ ಉತ್ತಮ ಪ್ರಜೆಗಳಾಗಿ: ವಿಜಯ ಕುಮಾರ್