ಮಡಿಕೇರಿ, ನ. 26: ಲೋಕ ಕಲ್ಯಾಣದ ಉದ್ದೇಶದೊಂದಿಗೆ ಭಾಗಮಂಡಲದ ಕಾವೇರಿ ತಟದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗವನ್ನು ಕೊಡಗಿನ ಭಕ್ತ ಜನತೆ ಯಶಸ್ವಿಗೊಳಿಸಲು ತನು, ಮನ, ಧನಪೂರ್ವಕ ಕೈಜೋಡಿಸುವಂತೆ ದೈವಜ್ಞ ವಿಷ್ಣು ಪ್ರಸಾದ್ ಹೆಬ್ಬಾರ್ ಕರೆ ನೀಡಿದರು. ನಗರದ ಬಾಲಭವನ ಸಭಾಂಗಣದಲ್ಲಿ ನಮಾಮಿ ಕಾವೇರಿ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಯಾಗದ ಉದ್ದೇಶ ವಿವರಿಸಿದರು.

ಕೊಡಗು ಸೇರಿದಂತೆ ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ, ಧೃತಿಗೆಟ್ಟವರಲ್ಲಿ ಆತ್ಮವಿಶ್ವಾಸ ತುಂಬುವದರೊಂದಿಗೆ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ ಸಹಿತ ಕೊಡಗಿನ ಕಲ್ಯಾಣಕ್ಕಾಗಿ ಈ ಯಾಗ ಅವಶ್ಯಕವೆಂದು ಅವರು ಪ್ರತಿಪಾದಿಸಿದರು.

ಪ್ರಕೃತಿಯ ಉಳಿವಿನೊಂದಿಗೆ ಜೀವ ಸಂಕುಲದ ಕಲ್ಯಾಣಕ್ಕಾಗಿ ತುಪ್ಪ, ಎಳ್ಳು, ಕಟ್ಟಿಗೆ, ಭೆರಣಿ ಬಳಸಿ ಅತಿರುದ್ರ ಮಹಾಯಾಗಕ್ಕೆ ರುದ್ರಮಂತ್ರ ಪಠನದಿಂದ ಪ್ರಕೃತಿ ಪುರುಷನಾದ ಶಿವನನ್ನು ಸಂಪ್ರೀತಗೊಳಿಸಲಾಗುವದು ಎಂದ ಅವರು ವೈಜ್ಞಾನಿಕವಾಗಿ ಅಮೇರಿಕಾದ ವಿಶ್ವವಿದ್ಯಾಲಯ ತಂಡವೊಂದು ಈ ಯಾಗದ ಪರಿಣಾಮ ಕುರಿತು ಅಧ್ಯಯನ ನಡೆಸಲಿದೆ ಎಂದು ನೆನಪಿಸಿದರು.

ಕಾವೇರಿ ಕ್ಷೇತ್ರ ಸಹಿತ ನದಿಯ ಪಾವಿತ್ರ್ಯ ಕಾಪಾಡುವದು, ಪ್ರಕೃತಿ ಸ್ವರೂಪಿಣಿ ಕಾವೇರಿ ಹಾಗೂ ಅಗಸ್ತ್ಯರ ಸಹಿತ ಶಿವನ ಕೋಪ ಶಮನಗೊಳಿಸಿ ಭೂಮಾತೆಯ ರಕ್ಷಣೆಗಾಗಿ ಈ ಯಾಗ ಆಯೋಜಿಸಿದ್ದು, ಬರುವ ಫೆಬ್ರವರಿ 15ರಿಂದ 23ರ ತನಕ ಭಾಗಮಂಡಲ ದಲ್ಲಿ ದೇವತಾ ಕೈಂಕರ್ಯ ಜರುಗಲಿದೆ ಎಂದರು.

ವಿಶೇಷವಾಗಿ 9 ದಿನಗಳಲ್ಲಿ 125ಕ್ಕೂ ಅಧಿಕ ಋತ್ವಿಜರಿಂದ ಯಾಗ ಹಾಗೂ ರುದ್ರ ಪಠನ ಜರುಗಲಿದ್ದು, ನಿತ್ಯವೂ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಖ್ಯಾತನಾಮರಿಂದ ಆಯೋಜಿಸಲಾಗುವದು ಎಂದು ವಿಷ್ಣು ಪ್ರಸಾದ್ ಹೆಬ್ಬಾರ್ ವಿವರಿಸಿದರು.

ಪ್ರಥಮ ದಿನದಂದು 108 ಕಾಯಿ ಗಣಹೋಮ, ಮರುದಿನ ಶತ ಚಂಡಿಕಾ ಯಾಗದೊಂದಿಗೆ ನಿತ್ಯವೂ ರುದ್ರಪಠನ, ಅತಿರುದ್ರ ಮಹಾಯಾಗದ ಕೈಂಕರ್ಯಗಳು ಮುಂದುವರಿದು ತಾ. 23ರಂದು ಪೂರ್ಣಾಹುತಿ ನೆರವೇರಲಿರುವದಾಗಿ ವಿವರಿಸಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಯಾಗಕ್ಕೆ ಸಹಕಾರದ ಭರವಸೆ ನೀಡಿದರು.

ಸಮಿತಿ ಅಧ್ಯಕ್ಷ ಕೋಡಿ ಪೊನ್ನಪ್ಪ ಹಾಗೂ ಕಾರ್ಯಾಧ್ಯಕ್ಷ ಎಂ.ಬಿ. ದೇವಯ್ಯ ಅವರುಗಳು ಯಾಗ ಹಮ್ಮಿಕೊಂಡ ಕುರಿತು ಸಭೆಗೆ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಯೋಗೇಶ್ ಗೌಡ ಮಾತನಾಡಿ, ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಎಲ್ಲಾ ರೀತಿ ಸಹಕಾರದ ಭರವಸೆ ನೀಡಿರುವರೆಂದು ಮಾಹಿತಿಯಿತ್ತರು. ಬೆಳೆಗಾರ ಪಿ.ಪಿ. ದಿನಮಣಿ, ತೊಡಿಕಾನ ವಸಂತಭಟ್ ಸಲಹೆ ನೀಡಿದರು.

ಸಭೆಯಲ್ಲಿ ಆರೆಸ್ಸೆಸ್ ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ, ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ, ತಲಕಾವೇರಿ ಅರ್ಚಕರಾದ ನಾರಾಯಣಾಚಾರ್, ಸಮಿತಿ ಸದಸ್ಯ ಕಲ್ಯಾಟಂಡ ಸುಬ್ಬಯ್ಯ ಮೊದಲಾದವರು ವೇದಿಕೆಯಲ್ಲಿದ್ದರು. ಖಜಾಂಚಿ ಐನಂಡ ಜಪ್ಪು ಅಚ್ಚಪ್ಪ ವಂದಿಸಿದರು.