ವೀರಾಜಪೇಟೆ, ನ. 26: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಎಂಬಲ್ಲಿ ಹೆಣ್ಣಾನೆಯೊಂದು ಇಂದು ಅಪರಾಹ್ನ ಸಾವನ್ನಪ್ಪಿದೆ. ಕೆದಮುಳ್ಳೂರು ಗ್ರಾಮದ ಬಾರಿಕಾಡುವಿನಲ್ಲಿ ಇಂದು ಬೆಳಿಗ್ಗೆ ಹೆಣ್ಣು ಕಾಡಾನೆಯೊಂದು ಕುಸಿದು ಬಿದ್ದಿತ್ತು. ಬೆಳಿಗ್ಗೆ 8.30 ರ ಹೊತ್ತಿಗೆ ಸ್ಥಳೀಯರು ರಸ್ತೆ ಬದಿ ಇರುವ ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್ ಅವರ ತೋಟದ ಬಳಿ ಕುಸಿದು ಬಿದ್ದ ಈ ಆನೆಯನ್ನು ಗಮನಿಸಿ ತಕ್ಷಣವೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಂಬೇಯಂಡ ಗೋಪಾಲ್ ಹಾಗೂ ತಂಡ ಸ್ಥಳಕ್ಕೆ ಬೇಟಿ ನೀಡಿ ಪರಿಸೀಲಿಸಿತು.

ಆನೆಗೆ ತೀವ್ರತರದ ಬಳಲಿಕೆ ಉಂಟಾಗಿ ಕುಸಿದು ಬಿದ್ದು ಜೀವನ್ಮರಣ ಹೋರಾಟ ನಡೆಸಿತ್ತು. ಸ್ಥಳದಲ್ಲಿ ಒದ್ದಾಡಿದ ಕಾರಣ ಒಂದಷ್ಟು ಮಣ್ಣು ಕಿತ್ತು ಬಂದಿತ್ತು. ಆನೆಯ ಮುಖದ ಭಾಗ ಮತ್ತು ಕೈಭಾಗದಲ್ಲಿ ಮಾತ್ರ ಚಲನೆ ಕಾಣುತ್ತಿತ್ತು. ಹಿಂಬದಿಯ ಕಾಲುಗಳಲ್ಲಿ ಚಲನೆ ಕಂಡು ಬರುತ್ತಿರಲಿಲ್ಲ. ಅದು ಬಿದ್ದ ಮೇಲಿನ ಭಾಗದಲ್ಲಿ ಯಾವ ಗಾಯದ ಗುರುತು ಇರಲಿಲ್ಲ. ಒದ್ದಾಟ ನಡೆಸಿದ ಕಾಡಾನೆ ಕೊನೆಗೂ ಅಪರಾಹ್ನ 1ರ ವೇಳೆಗೆ ತನ್ನ ಕೊನೆ ಯುಸಿರೆಳೆಯಿತು. ಬೆಳಗ್ಗಿನಿಂದಲೆ ಜನರು ಹಿಂಡು ಹಿಂಡಾಗಿ ಸ್ಥಳಕ್ಕೆ ಬಂದು ಆನೆಯ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.