ಕೂಡಿಗೆ, ನ. 26: ಖಾಸಗಿ ಬಸ್ ಹಾಸನ-ಮಡಿಕೇರಿ ಮುಖ್ಯ ರಸ್ತೆಯ ಕೊಣನೂರು ಪಟ್ಟಣದ ಉಳ್ಳೇನಹಳ್ಳಿ ಸಮೀಪದ ಭತ್ತದ ಗದ್ದೆಗೆ ಉರುಳಿ ಬಿದ್ದ ಘಟನೆ ಸೋಮವಾರ ಮಧ್ಯಾಹ್ನದ ಸಮಯದಲ್ಲಿ ಜರುಗಿದ್ದು ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದೆ.

ಕೊಡಗಿನ ಕುಶಾಲನಗರದ ಹಾರಂಗಿ ಬಳಿಯ ಹೇರೂರಿನಿಂದ ಅರಕಲಗೂಡು ಸಮೀಪದ ಅತ್ನಿ ಗ್ರಾಮಕ್ಕೆ ಬೀಗರ ಔತಣಕ್ಕೆಂದು ಹೋಗುತ್ತಿದ್ದ ಸೋಮವಾರಪೇಟೆಯ ರಾಜೇಂದ್ರ ಎಂಬವರಿಗೆ ಸೇರಿದ ಖಾಸಗಿ ಬಸ್ (ಕೆಎ-06 ಎ-7499) ಭತ್ತದ ಗದ್ದೆಗೆ ಉರುಳಿದ್ದು ಬಸ್ಸಿನಲ್ಲಿದ್ದ 50 ರಿಂದ 55 ಜನರಲ್ಲಿ 46 ಜನರಿಗೆ ಗಾಯಗಳಾಗಿವೆ. 6 ಮಂದಿಗೆ ಗಂಭೀರ ಹಾಗೂ 6 ಜನರಿಗೆ ತೀವ್ರತರಹದ ಗಾಯಗಳಾಗಿವೆ. 12 ಜನ ಗಾಯಾಳುಗಳನ್ನು 6 ಸರ್ಕಾರಿ ಆಂಬ್ಯುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗಳಾಗಿದ್ದ 46 ಜನರಿಗೆ ಕೊಣನೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತೀವ್ರ ನಿಗಾವಹಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡುತ್ತಾ, ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿರುವದು ಈ ಘಟನೆಗೆ ಕಾರಣವಾಗಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ, ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ಘಟನಾ ಸ್ಥಳಕ್ಕೆ ಮತ್ತು ಕೊಣನೂರಿನ ಸರ್ಕಾರಿ ಆಸ್ಪತ್ರೆಗೆ ಬಿಎಸ್‍ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ತಹಶೀಲ್ದಾರ್ ಪಾರ್ಥಸಾರಥಿ, ಡಿಎಚ್‍ಓ ಸತೀಶ್‍ಕುಮಾರ್, ಟಿಎಚ್‍ಓ ಸ್ವಾಮಿಗೌಡ, ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಕೆರೆಕೋಡಿ, ಪಿಡಿಓ ಗಣೇಶ್, ತಾಪಂ ಸದಸ್ಯ ಇಮ್ರಾನ್ ಮೊಖ್ತಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್, ಪ್ರಗತಿಪರ ರೈತ ಮಗ್ಗೆ ರಂಗಸ್ವಾಮಿ, ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಪಿಎಸ್‍ಐ ಸಾಗರ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

ಬಸ್ ಭತ್ತದ ಗದ್ದೆಗೆ ಉರುಳಿದೆ ಎಂಬ ಸುದ್ದಿ ತಿಳಿದ ಜನರು ಸಾಗರೋಪಾದಿಯಲ್ಲಿ ಘಟನಾ ಸ್ಥಳಕ್ಕೆ ಕ್ಷಣ ಮಾತ್ರದಲ್ಲೇ ಜಮಾಯಿಸಿದ ಪರಿಣಾಮ, ಹಾಸನ-ಮಡಿಕೇರಿ ಮುಖ್ಯರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ಥಗೊಂಡಿತ್ತು. ನೂಕು ನುಗ್ಗಲು ಉಂಟಾದ್ದರಿಂದ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.