ಕರಿಕೆ, ನ. 26: ಜಿಲ್ಲೆಯ ಗಡಿಗ್ರಾಮ ಕರಿಕೆಗೆ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮೂಲಕ ಹಾದು ಪ್ರಮುಖ ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ತಲಕಾವೇರಿ ತೀರ್ಥ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಭಾಗಮಂಡಲ - ಕರಿಕೆ ಹೆದ್ದಾರಿ ಇದೀಗ ತೀವ್ರ ಹದಗೆಟ್ಟಿದ್ದು ಸಂಬಂಧಿಸಿದ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ.

ಗ್ರಾಮದ ಗಡಿ ಚೆಂಬೇರಿಯಿಂದ ಭಾಗಮಂಡಲಕ್ಕೆ ಸುಮಾರು ಇಪ್ಪತ್ತೆಂಟು ಕಿ.ಮೀ. ದೂರದ ರಸ್ತೆಗೆ ಪೂರ್ಣ ಪ್ರಮಾಣದ ಡಾಂಬರಿಕರಣ ಮಾಡದೆ ಹತ್ತಾರು ವರ್ಷಗಳೇ ಕಳೆದಿದೆ. ಕಳೆದ ಬಾರಿ ಅಲ್ಪ ಪ್ರಮಾಣದಲ್ಲಿ ಡಾಂಬರಿಕರಣ ಮಾಡಿದ್ದು, ಈ ಬಾರಿ ಸುರಿದ ಧಾರಾಕಾರ ಮಳೆ ಹಾಗೂ ಬಂಟ್ವಾಳ-ಮೈಸೂರು ಹೆದ್ದಾರಿ ಮದೆನಾಡು-ಜೋಡುಪಾಲ ಸಮೀಪ ಗುಡ್ಡ ಕುಸಿತ ಹಿನ್ನೆಲೆ ಪರ್ಯಾಯ ಮಾರ್ಗವಾಗಿ ಬಳಸಿದ ಪರಿಣಾಮ ವಾಹನ ದಟ್ಟಣೆಯ ಕಾರಣ ಈ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ನಿರ್ವಹಣೆ ಮಾಡಬೇಕಿರುವ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳದಿರುವದು ವಿಷಾಧಕರವಾಗಿದೆ. ಅಲ್ಲದೆ ಭೂ ಕುಸಿತದ ಸಂದರ್ಭ ಮಡಿಕೇರಿಗೆ ಇದೇ ಮಾರ್ಗವಾಗಿ ತೆರಳಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರು ಕರಿಕೆಯ ಸ್ಥಳೀಯ ಮುಖಂಡರೊಂದಿಗೆ ಮಾತನಾಡಿ, ಕೂಡಲೇ ಈ ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವದು. ಅಲ್ಲದೆ ಇದು ರಾಷ್ಟ್ರೀಯ ಹೆದ್ದಾರಿ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಿದ್ದು ಇದರ ಮೇಲ್ದರ್ಜೆಗೆ ಏರಿಸಲು ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದ್ದರು.

ಅಲ್ಲದೆ ಗ್ರಾಮದಲ್ಲಿ ಜಿಲ್ಲೆ ಹಾಗೂ ತಾಲೂಕನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಇದ್ದು ನಿರಂತರವಾಗಿ ಇದೇ ಮಾರ್ಗದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಸಂಚರಿಸುತ್ತಿದ್ದರೂ ರಸ್ತೆ ದುರಸ್ತಿ ಬಗ್ಗೆ ಯಾವ ಚಕಾರ ಎತ್ತದಿರುವದು ದುರಂತವಾಗಿದೆ. ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಹೊದ್ದೆಟ್ಟಿ ಸುಧೀರ್