ಕುಶಾಲನಗರ, ನ. 27: ಕುಶಾಲನಗರ ಗಣಪತಿ ದೇವಾಲಯ ರಥೋತ್ಸವ ಅಂಗವಾಗಿ ನಡೆಯುತ್ತಿರುವ ಜಾತ್ರೆ ಈ ಬಾರಿ ಕಳೆಗುಂದಿದೆ. ಕೊಡಗು ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ತಾಪ ಜಾತ್ರಾ ಮಳಿಗೆಗಳಿಗೂ ತಟ್ಟಿದೆ ಎಂದರೆ ತಪ್ಪಾಗಲಾರದು.

ಕುಶಾಲನಗರ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ 10 ದಿನಗಳ ಕಾಲ ನಡೆಯಲಿರುವ ಮನರಂಜನಾ ಮಳಿಗೆಗಳಲ್ಲಿ ಜನಸಾಂದ್ರತೆ ಕಡಿಮೆ ಕಂಡುಬಂದಿದೆ. ಇದರೊಂದಿಗೆ ಜಾತ್ರೆಗೆ ಬರಬೇಕಾದ ಕೆಲವು ಸಾಹಸಮಯ ಆಟಗಳ ಅಲಭ್ಯತೆ ಕೂಡ ಗೋಚರಿಸಿದೆ.

ದೇವಾಲಯ ಸಮಿತಿ ಮೂಲಕ ಲಕ್ಷಾಂತರ ರೂ. ಗಳ ಬಿಡ್ ಕರೆದು ಜಾತ್ರಾ ಮಾಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಹೆಚ್.ಡಿ.ಚಂದ್ರು ಅವರ ಪ್ರಕಾರ ಕಳೆದ ಬಾರಿಗಿಂತ ಜಾತ್ರೆಗೆ ಆಗಮಿಸುವ ಜನರ ಸಂಖ್ಯೆ ಕಡಿಮೆಯಾಗಿರುವದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರ ನಿರೀಕ್ಷೆ ಇದೆ ಎಂದಿದ್ದಾರೆ.

ಜಾತ್ರಾ ಮೈದಾನದಲ್ಲಿ ಜಾಯಿಂಟ್ ವೀಲ್, ಮಕ್ಕಳ ಕ್ರೀಡೆಗಳು ಕಂಡುಬಂದಿದ್ದು ಮರಣಬಾವಿ ಮತ್ತಿತರ ಸಾಹಸಮಯ ಕ್ರೀಡೆಗಳ ಕೊರತೆ ಹಿನ್ನೆಲೆಯಲ್ಲಿ ಜನಸಂಖ್ಯೆ ಕೂಡ ವಿರಳವಾಗಲು ಕಾರಣವಾಗಿದೆ. ಮಳಿಗೆಗಳಿಗೆ ಬಾಡಿಗೆ ದರ ಕೂಡ ಈ ಬಾರಿ ಹೆಚ್ಚಳಗೊಂಡಿರುವ ಕಾರಣ ಜಾತ್ರೆಯಲ್ಲಿ ಮಳಿಗೆಗಳ ಸಂಖ್ಯೆ ಕ್ಷೀಣಿಸಲು ಪ್ರಮುಖ ಕಾರಣ ಎಂಬದು ಕೆಲವು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಈ ನಡುವೆ 98ನೇ ಗೋಪ್ರದರ್ಶನ ಮತ್ತು ಜಾತ್ರೆ ಡಿ.5 ರಿಂದ 3 ದಿನಗಳ ಕಾಲ ನಡೆಯಲಿದೆ. ಸಾಂಸ್ಕøತಿಕ ವೇದಿಕೆ ಕಾರ್ಯಕ್ರಮ ಡಿ 1 ರಿಂದ 7 ರವರೆಗೆ ಜಾತ್ರಾ ಮೈದಾನದಲ್ಲಿ ನಡೆಯಲಿದ್ದು, ದೇವಾಲಯ ಆವರಣದಲ್ಲಿ ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯುತ್ತಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ವಿ.ಎನ್.ವಸಂತಕುಮಾರ್ ತಿಳಿಸಿದ್ದಾರೆ. -ಸಿಂಚು