ಕುಶಾಲನಗರ, ನ. 27: ಕುಶಾಲನಗರದ ಮನು ಪ್ರೆಸ್ ಆಶ್ರಯದಲ್ಲಿ ಜಿಲ್ಲಾಮಟ್ಟದ ಪ್ರೌಢ ಶಾಲೆಗಳ ವಿದ್ಯಾರ್ಥಿಗಳ ಕಲಾ ಮೇಳ ರೈತ ಸಹಕಾರ ಭವನದಲ್ಲಿ ಜರಗಿತು.

ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಪ್ರೌಢ ಶಾಲೆಗಳ ಸುಮಾರು ಮುನ್ನೂರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕಲಾ ಮೇಳಕ್ಕೆ ಮೆರುಗು ತಂದರು. ವಿದ್ಯಾರ್ಥಿಗಳು ತಾವೇ ರಂಗೋಲಿ ಪುಡಿ ಹಾಗೂ ಬಣ್ಣಗಳನ್ನು ತಂದು ಬಗೆಬಗೆಯ ಚಿತ್ತಾರದ ರಂಗೋಲಿ ಬಿಡಿಸುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಬಿಳಿ ಹಾಳೆಯ ಮೇಲೆ ಬಗೆ ಬಗೆಯ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸೋಲಾರ್ ಬಳಸಿ ಏನೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಾರುವ ಸೋಲಾರ್ ಪಾರ್ಕ್, ಕಸದಿಂದ ರಸ ಮಾಡುವ ಸಾವಯವ ಗೊಬ್ಬರದ ಬಳಕೆ ಮಾಹಿತಿ, ನೀರನ್ನು ಅಪವ್ಯಯ ಮಾಡದಂತೆ ಬಿತ್ತರಿಸುವ ಚಿತ್ರಗಳು ಸೇರಿದಂತೆ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆಗಳು ರಚನೆಗೊಂಡಿದ್ದು ವಿಶೇಷವಾಗಿತ್ತು

ಭರತನಾಟ್ಯ, ಸಾಮೂಹಿಕ ನೃತ್ಯ, ಗುಂಪು ಡ್ಯಾನ್ಸ್ ಮನಸೂರೆಗೊಂಡಿತು. ಮನು ಪ್ರೆಸ್ ವ್ಯವಸ್ಥಾಪಕ ಎನ್.ಕೆ. ಮೋಹನ್ ಕುಮಾರ್ ನೇತೃತ್ವದಲ್ಲಿ ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಲಾ ಮೇಳದಲ್ಲಿ ವಿದ್ಯಾರ್ಥಿಗಳು ಮತ್ತು ಸಂಬಂಧಿಸಿದ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.