ಮಡಿಕೇರಿ, ನ. 27: ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಪ್ರಸಕ್ತ ವರ್ಷ ಉಂಟಾದ ಪ್ರಾಕೃತಿಕ ವಿಕೋಪ ದಿಂದಾಗಿ ಪ್ರಮುಖ ಕೃಷಿ ಫಸಲು ಆದ ಭತ್ತದ ಬೆಳೆ ಹಾಗೂ ಮುಸುಕಿನ ಜೋಳದ ಬೆಳೆಯ ಮೇಲೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಪ್ರಸ್ತುತ ಕೊಡಗಿನ ಸುಗ್ಗಿ ಹಬ್ಬ ಎಂದು ಪರಿಗಣಿತವಾಗಿರುವ ಹುತ್ತರಿ ಹಬ್ಬದ ಸಂಭ್ರಮವು ಪೂರ್ಣಗೊಂಡಿದ್ದು, ಭತ್ತದ ಫಸಲು ಕಟಾವಿನತ್ತ ಬರುವ ಕಾಲ ಸನ್ನಿಹಿತವಾಗುತ್ತಿದೆ.ಆದರೆ ಜಿಲ್ಲೆ ಈ ತನಕ ಕಂಡು ಕೇಳರಿಯದ ಮಾದರಿಯಲ್ಲಿ ಘಟಿಸಿ ಹೋಗಿರುವ ಪ್ರಾಕೃತಿಕ ದುರಂತದಿಂದಾಗಿ ಈ ಬಾರಿ ಈ ಫಸಲುಗಳ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ಪ್ರಸಕ್ತ ವರ್ಷವಾದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಫಸಲು ಹಾಗೂ 4 ಸಾವಿರ ಹೆಕ್ಟೇರ್‍ನಲ್ಲಿ ಮುಸುಕಿನ ಜೋಳವನ್ನು ಬೆಳೆಯುವ ಗುರಿ ಹೊಂದಲಾಗಿತ್ತು. ಇದರಲ್ಲಿ 23,270 ಹೆಕ್ಟೇರ್‍ನಲ್ಲಿ ಭತ್ತದ ಫಸಲು ಹಾಗೂ 2,870 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿತ್ತು. ಆದರೆ ಪ್ರಾಕೃತಿಕ ಏರುಪೇರಿನಿಂದಾಗಿ ನಿರೀಕ್ಷಿತ ಗುರಿಯಲ್ಲಿ ಶೇ. 33ಕ್ಕೂ ಅಧಿಕ ಹಾನಿ ಯಾಗಿರುವದು ಈ ಬಾರಿಯ ದುರಂತವಾಗಿದೆ.

ಒಟ್ಟು 7,109.04 ಹೆಕ್ಟೇರ್ ಪ್ರದೇಶದಲ್ಲಿ ಫಸಲು ಹಾನಿ ಗೀಡಾಗಿದ್ದರೆ, 695.31 ಹೆಕ್ಟೇರ್‍ನಲ್ಲಿ ಹೂಳು ತುಂಬಿ ನಷ್ಟ ಸಂಭವಿಸಿದೆ. ಇದರಿಂದಾಗಿ ಒಟ್ಟಾರೆಯಾಗಿ 568.23 ಲಕ್ಷದಷ್ಟು ಹಾನಿಯಾಗಿರುವದಾಗಿ ಕೃಷಿ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನಲ್ಲಿ 2510 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 3786 ಹೆಕ್ಟೇರ್ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 813.04 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಈ ಪರಿಸ್ಥಿತಿಯಿಂದಾಗಿ ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯ ರೈತಾಪಿ ವರ್ಗದವರು ತೀವ್ರ ಸಂಕಷ್ಟವನ್ನು ಎದುರಿಸುವಂತಾಗಿದೆ. ನಷ್ಟಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನಲ್ಲಿ 237.73 ಲಕ್ಷ, ಸೋಮವಾರಪೇಟೆ ತಾಲೂಕಿನಲ್ಲಿ 277.38 ಲಕ್ಷ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 57.12 ಲಕ್ಷದಷ್ಟು ನಷ್ಟ ಸಂಭವಿಸಿರುವದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.