ಬೆಂಗಳೂರು, ನ. 27: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ, ಭೂಕುಸಿತ ನೆರೆ ಸ್ಥಿತಿಯಿಂದ ಒಟ್ಟು ರೂ. 4 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ಇದರಲ್ಲಿ ರೂ. 546 ಕೋಟಿ ಮಾತ್ರ ಕೇಂದ್ರ ನೀಡಿದೆ ಎಂದರು.ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಇಂದು ಕರೆದಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ತಾ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಪ್ರಸ್ತುತ ರಾಜ್ಯದಲ್ಲಿ 100 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಿಸಲಾಗಿದೆ. ಇನ್ನು ಕೆಲ ತಾಲೂಕು ಬರಗಾಲಕ್ಕೆ ಸೇರಲಿದೆ. ಹೀಗಾಗಿ ಡಿಸಿಗಳು ಸಮರ್ಪಕವಾಗಿ ನಿಭಾಯಿಸಿ ಎಂದು ಉಪಮುಖ್ಯ ಮಂತ್ರಿ ಸಲಹೆ ನೀಡಿದರು.ಜನಸಾಮಾನ್ಯರು ವಿಧಾನಸೌಧಕ್ಕೆ ಬರುವದನ್ನು ತಪ್ಪಿಸಿ ಡಿಸಿಗಳೇ ಅವರ ಸಮಸ್ಯೆ ಆಲಿಸುವಂತೆ ಸೂಚಿಸಿದ್ದೆವು. ಜೊತೆಗೆ ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಹೂಡುವಂತೆಯೂ ಹೇಳಲಾಗಿತ್ತು ಎಂದರು.

ಸಾಲಮನ್ನಾ ಕುರಿತು: ಸಾಲ ಮನ್ನಾ ಯೋಜನೆ ಜಾರಿಗೆ ಸರ್ಕಾರ ಎಲ್ಲ ಸಿದ್ಧತೆಗಳನ್ನೂ ಪೂರ್ಣ ಗೊಳಿಸಿದೆ. ಅನುಷ್ಠಾನದ ಸಂದರ್ಭದಲ್ಲಿ ಮಧ್ಯವರ್ತಿಗಳು ಈ ಹಣವನ್ನು ದುರುಪಯೋಗಪಡಿಸಿ ಕೊಳ್ಳದಂತೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಸಾಲ ಮನ್ನಾ ಸರ್ಕಾರದ ಅತ್ಯಂತ ಪ್ರಮುಖ ಕಾರ್ಯಕ್ರಮ ವಾಗಿದೆ. ಈಗಾಗಲೇ ಜಿಲ್ಲೆಗಳಲ್ಲಿ ಬ್ಯಾಂಕುಗಳು ಸಾಲ ಪಡೆದ ರೈತರ ಮಾಹಿತಿ ಒದಗಿಸಿರುವ ಬಗ್ಗೆ ವಿವರಗಳನ್ನು ಒದಗಿಸುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದರು.

ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ

ಜೊತೆಗೆ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಬಡವರ ಬಂಧು. ಬೀದಿ ಬದಿ ವ್ಯಾಪಾರಿಗಳು ಖಾಸಗಿಯವರಿಂದ ಸಾಲ ಪಡೆದು ತೀರಿಸಲಾಗದೆ ದೌರ್ಜನ್ಯಕ್ಕೆ ಒಳಗಾಗುವ ನಿದರ್ಶನಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು ಇಂತಹ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಅತಿವೃಷ್ಟಿ ತಲೆದೋರಿದಾಗ, ವಿವಿಧ ಸಮಸ್ಯೆಗಳು, ಸವಾಲುಗಳು ಎದುರಾದಾಗ ಜಿಲ್ಲಾ ಡಳಿತಗಳು ಪ್ರಾಮಾಣಿಕವಾಗಿ ಸ್ಪಂದಿಸಿ, ಶ್ರಮಿಸಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಪ್ರಸ್ತುತ ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ತಲೆದೋರಿದ್ದು, ಮುಂದಿನ 3-4 ತಿಂಗಳು ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಈ ಸವಾಲನ್ನು ಜಿಲ್ಲಾಡಳಿತಗಳು ಸಮರ್ಥ ವಾಗಿ ಎದುರಿಸಬೇಕು ಎಂದು ಹೇಳಿದರು.

ಬರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಉಸ್ತುವಾರಿ

(ಮೊದಲ ಪುಟದಿಂದ) ಸಚಿವರು ಹಾಗೂ ಕಾರ್ಯದರ್ಶಿಗಳ ಮಾರ್ಗ ದರ್ಶನದಲ್ಲಿ ಬರಪರಿಹಾರ ಕಾರ್ಯ ಚಟುವಟಿಕೆಗಳನ್ನು ರೂಪಿಸುವಂತೆ ತಿಳಿಸಿದರು. ಅಲ್ಲದೆ, ಅತಿವೃಷ್ಟಿ ಪರಿಹಾರಕ್ಕಾಗಿ ಕೇಂದ್ರದಿಂದ ರೂ. 546 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದ ಸದ್ಬಳಕೆಗೆ ಕ್ರಿಯಾ ಯೋಜನೆ ರೂಪಿಸಿ ಕೊಳ್ಳುವಂತೆಯೂ ಸೂಚಿಸಿದರು.

ಬರ ಪರಿಹಾರ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನ ಗೊಳ್ಳುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಗಳಿರುವದು ಕಂದಾಯ ಇಲಾಖೆಯಲ್ಲಿ. ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸುವಂತೆ ಸೂಚಿಸಿದರು.

ಆರ್ಥಿಕ ವರ್ಷದಲ್ಲಿ ಇನ್ನುಳಿದ 3 ತಿಂಗಳಲ್ಲಿ ಸರ್ಕಾರದ ಹಳೆಯ ಹಾಗೂ ಹೊಸ ಯೋಜನೆಗಳ ಅನುಷ್ಠಾನವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು. ಅಲ್ಲದೆ ಪ್ರತಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸುವ ಅಧಿಕಾರವನ್ನು ನಿಮಗೆ ನೀಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.