ಸಿದ್ದಾಪುರ, ನ. 27 : ದೊಡ್ಡಿ ಜಾಗದ ವಿಚಾರದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ಸಿದ್ದಾಪುರ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣಿÀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ಗೆ ಸಂಬಂಧವಿಲ್ಲದ ಜಾಗಕ್ಕಾಗಿ ಪರ ವಿರೋಧ ಚರ್ಚೆಗಳ ನಡುವೆ ಅಧ್ಯಕ್ಷ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿಯೊಂದಿಗೆ ಕೂಗಾಟ, ಗದ್ದಲ ಏರ್ಪಟ್ಟಿತು. ಕಂದಾಯ ಇಲಾಖೆಗೆ ಸೇರಿದ ಕರಡಿಗೋಡು ರಸ್ತೆಯಲ್ಲಿರುವ ಜಾಗದಲ್ಲಿ ಈ ಹಿಂದೆ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡಲು ಕೆಲವು ಸದಸ್ಯರ ವಿರೋಧದ ನಡುವೆ ಗ್ರಾ.ಪಂ. ಮುಂದಾಗಿತ್ತು. ಸದಸ್ಯ ಶೌಕತ್ ಆಲಿ ಸೇರಿದಂತೆ ಸ್ಥಳೀಯರು ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. ಈ ಬಗ್ಗೆ ತೀವ್ರ ಚರ್ಚೆ -ವಿಚರ್ಚೆ ನಡೆಯಿತು. ಕಂದಾಯ ಇಲಾಖೆಯ ಜಾಗದಲ್ಲಿ 25 ವರ್ಷಗಳ ಹಿಂದೆ ದೊಡ್ಡಿಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಕಳೆದ 20 ವರ್ಷಗಳಿಂದ ದೊಡ್ಡಿಯನ್ನು ಬಳಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ದೊಡ್ಡಿಯು ಶಿಥಿಲಾವಸ್ಥೆಯಲ್ಲಿದೆ. ಆದರೇ ಇಂದು ನಡೆದ ಸಭೆಯಲ್ಲಿ ಅಧ್ಯಕ್ಷರು ಬೀಡಾಡಿ ದನಗಳು ಹಾಗೂ ಆಡುಗಳನ್ನು ನಿಯಂತ್ರಿಸುವ ಬಗ್ಗೆ ತಿಳಿಸಿ, ಕರಡಿಗೋಡು ರಸ್ತೆಯಲ್ಲಿರುವ ದೊಡ್ಡಿಯನ್ನು ದುರಸ್ತಿಪಡಿಸಿ ಬೀಡಾಡಿ ದನ ಹಾಗೂ ಆಡುಗಳನ್ನು ದೊಡ್ಡಿಗೆ ಸಾಗಿಸುವ ಬಗ್ಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಅಬ್ದುಲ್ ಶುಕೂರ್, ಶೌಕತ್ ಆಲಿ, ರೆಜಿತ್ ಕುಮಾರ್, ಹುಸೈನ್ ಸೇರಿದಂತೆ ಕೆಲ ಸದಸ್ಯರು, ಕರಡಿಗೋಡುವಿನ ದೊಡ್ಡಿ ಉಪಯೋಗಿಸದೆ ಶಿಥಿಲಾವಸ್ಥೆಯಲ್ಲಿದೆ. ಮಾತ್ರವಲ್ಲದೇ ಆ ಜಾಗವು ಗ್ರಾ.ಪಂ ಹೆಸರಿನಲ್ಲಿ ಇಲ್ಲದ ಕಾರಣ ಅನಗತ್ಯವಾಗಿ ಕಾಮಗಾರಿ ಕೈಗೊಂಡು ಹಣ ಪೋಲು ಮಾಡಬಾರದೆಂದು ತಿಳಿಸಿದರು. ಮಾತ್ರವಲ್ಲದೇ ಜಾನುವಾರುಗಳನ್ನು ದೊಡ್ಡಿಯಲ್ಲಿ ಹಾಕಿದ ನಂತರ ಅವುಗಳಿಗೆ ಬೇಕಾದ ಮೇವು, ನೀರು ಲಭ್ಯವಿಲ್ಲದೆ ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಇದೆ. ಹಾಗಾಗಿ ಜಾನುವಾರುಗಳ ನಿಯಂತ್ರಣಕ್ಕೆ ಬೀಡಾಡಿ ಜಾನುವಾರುಗಳನ್ನು ಸುಸಜ್ಜಿತವಾಗಿರುವ ತಿತಿಮತಿ ಅಥವಾ ಮಾಲ್ದಾರೆ ದೊಡ್ಡಿಗಳಿಗೆ ಕಳುಹಿಸಿಕೊಡಲು ಒತ್ತಾಯಿಸಿದರು. ಈ ಸಂದರ್ಭ ಅಧ್ಯಕ್ಷರು ಸೇರಿದಂತೆ ಕೆಲವರು ಹಳೇ ದೊಡ್ಡಿಯನ್ನೇ ದುರಸ್ತಿ ಮಾಡಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ದೊಡ್ಡಿ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ಏರ್ಪಟ್ಟು, ಅಧ್ಯಕ್ಷರು ಸದಸ್ಯರ ನಡುವೆ ಏಕವಚನ ಪ್ರಯೋಗವೂ ನಡೆಯಿತು. ಈ ಸಂದರ್ಭ ಸಭೆಯು ಗೊಂದಲದ ಗೂಡಾಗಿದ್ದಲ್ಲದೇ, ಒಂದು ಗಂಟೆಗೂ ಹೆಚ್ಚು ಕಾಲ ಇದೇ ಚರ್ಚೆಯಲ್ಲಿ ಸಭೆ ಮುಳುಗಿತ್ತು. ಇದೇ ಸಂದರ್ಭ ಸದಸ್ಯರಾದ ಶುಕೂರ್, ಶೌಕತ್ ಆಲಿ, ರೆಜಿತ್ ಕುಮಾರ್, ಹುಸೈನ್ ಸೇರಿದಂತೆ ಇತರೆ ಕೆಲವು ಸದಸ್ಯರು, ಕರಡಿಗೋಡು ರಸ್ತೆಯ ಸರಕಾರಿ ಜಾಗದಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು ಹಾಗೂ ಪತ್ರಕರ್ತರ ಸಂಘ, ಮಹಿಳಾ ಸಂಘಕ್ಕೂ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ ವ್ಯಾಪ್ತಿಯ ಗ್ರಾಂ.ಪಂ ಅಧೀನದಲ್ಲಿರುವ ಜಾಗಗಳನ್ನು ಗ್ರಾ.ಪಂ ಹೆಸರಿಗೆ ವರ್ಗಾವಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ವ್ಯಕ್ತಿಯೊರ್ವರು ಅನುಮತಿ ಇಲ್ಲದೇ ಅನಧಿಕೃತ ಕೊಳವೆಬಾವಿಯನ್ನು ನಿರ್ಮಿಸಿದ್ದು, ಈ ಹಿಂದೆ ಖಲೀಲ್ ಎಂಬವರು ದೂರು ನೀಡಿದ್ದರು. ಇದೀಗ ಅನಧಿಕೃತ ಕೊಳವೆಬಾವಿಗೆ ವಿದ್ಯುತ್ ಮೋಟಾರ್ ಅಳವಡಿಸಿ ನೀರು ಉಪಯೋಗಿಸುತ್ತಿರುವ ಬಗ್ಗೆ ಬಂದ ದೂರಿನನ್ವಯ ಅನಧಿಕೃತ ಕೊಳವೆ ಬಾವಿ ತೋಡಿದ ವ್ಯಕ್ತಿಗೆ ನೋಟೀಸ್ ನೀಡಲು ತೀರ್ಮಾನಿಸಲಾಯಿತು.

ಗ್ರಾ.ಪಂ. ಪಿ.ಡಿ.ಓ. ವಿಶ್ವನಾಥ್, ಸಭೆಯಲ್ಲಿ ಸ್ವಾಗತಿಸಿ, ವಂದಿಸಿದರು.