ಗೋಣಿಕೊಪ್ಪ ವರದಿ, ನ. 27: ಎಲ್ಲರಿಗೂ ಪ್ರೀತಿ ಹಂಚಿದ ಸ್ವಾಮಿ ಜಗದಾತ್ಮಾನಂದಜೀ ಮಹಾರಾಜ್ ಶ್ರೇಷ್ಟ ಸಂತರಾಗಿದ್ದರು ಎಂಬ ಮಾತುಗಳು ಶ್ರೀ ರಾಮಕೃಷ್ಣ ಮಹಾಸಂಘದ ಹಿರಿಯ ಸನ್ಯಾಸಿ, ಬದುಕಲು ಕಲಿಯಿರಿ ಕೃತಿಕಾರ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ವಿಶ್ರಾಂತ ಸ್ವಾಮೀಜಿಯಾಗಿ ಸೇವೆ ಸಲ್ಲಿಸಿ ದೈವಾಧೀನರಾದ ಸ್ವಾಮಿ ಜಗದಾತ್ಮನಂದಜೀ ಅವರಿಗೆ ನಡೆದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಮೊಳಗಿದವು.ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪನಂದಜೀ ಪ್ರಾಸ್ತಾವಿಕವಾಗಿ ಮಾತನಾಡಿ, ಜಗದಾತ್ಮನಂದಜೀ ಅವರ ಮಾತಿನ ಧಾಟಿಗಳು ಸ್ವಾಮಿ ವಿವೇಕಾನಂದರನ್ನು ನೆನೆಸಿ ಕೊಳ್ಳುವಂತಿತ್ತು. ವಿವೇಕಾನಂದರ ಬಗ್ಗೆ ಅವರು ಹೆಚ್ಚು ಆನಂದದಿಂದ ಹೇಳಿಕೊಳ್ಳುತ್ತಿದ್ದರು. ವಿವೇಕಾನಂದರ ಸಂದೇಶಗಳನ್ನು ಹೆಚ್ಚಾಗಿ ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದ್ದರು. ಕಠಿಣ ಪರಿಸ್ಥಿತಿಯಲ್ಲೂ ಎಲ್ಲರಿಗೂ ಸಾಂತ್ವನದ ಮಾತುಗಳು ಆತ್ಮವಿಶ್ವಾಸ ಮೂಡಿಸುತ್ತಿತ್ತು. ಅವರಲ್ಲಿದ್ದ ಆಧ್ಯಾತ್ಮಿಕ ಸ್ಪೂರ್ತಿ, ಪುಸ್ತಕ ಪ್ರೀತಿ, ಸ್ಮರಣಶಕ್ತಿ, ಸಾಧನೆ ಬಗೆಗಿನ ಕಾಳಜಿ ನಮಗೆ ಇಂದು ಬಳುವಳಿಯಾಗಿ ಉಳಿದಿವೆ. ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುವ ಮೂಲಕ ಅವರ ಸೇವೆ ಜನರಿಗೆ ನಿತ್ಯ ದೊರಕುವಂತೆ ಯೋಜನೆ ರೂಪಿಸಲಾಗಿದೆ ಎಂದರು.

ರಾಮಕೃಷ್ಣ ಮಿಷನ್‍ನ ಹಿರಿಯ ಸ್ವಾಮೀಜಿ

(ಮೊದಲ ಪುಟದಿಂದ) ನಿರ್ಭಯಾನಂದಾಜೀ ಮಹಾರಾಜ್ ತಮ್ಮ ನುಡಿನಮನದಲ್ಲಿ ‘ಬದುಕಲು ಕಲಿಯಿರಿ’ ಕೃತಿ ಬಗ್ಗೆ ಮಾತನಾಡಿ, ಸುಮಾರು 3.5 ಲಕ್ಷ ಮುದ್ರಣ ಕಂಡಿರುವ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಎಂದು ಭಾವಿಸಿ ಕೃತಿಕಾರ ಜಗದಾತ್ಮಾನಂದಜೀ ಅವರ ಶೃದ್ಧಾಂಜಲಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ನಡೆಸಬೇಕಿದೆ ಎಂದರು.

ಬದಕಲು ಕಲಿಯಿರಿ ಪುಸ್ತಕ ರಾಜಕಾರಣಿಗಳು ಓದಲೇಬೇಕಾದ ಪುಸ್ತಕವಾಗಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಕೂಡ ಈ ಪುಸ್ತಕದಿಂದ ಪ್ರಭಾವಿತರಾಗಬೇಕು. ಬೆಂಗಳೂರಿನ ಮೇಯರ್ ಒಬ್ಬರು ಈ ಪುಸ್ತಕ ಓದಿ ನೈಜ ಸೇವೆಗೆ ತನ್ನ ಅಧಿಕಾರವನ್ನು ಮೂಡಿಪಾಗಿಸಿಕೊಂಡಿದ್ದರು ಎಂಬದನ್ನು ಸ್ಮರಿಸಿಕೊಂಡರು.

ಯುವಕರಲ್ಲಿ ಸಬಲೀಕರಣ, ಆಧ್ಯಾತ್ಮಿಕದಲ್ಲಿ ಅಂತರ್‍ಪ್ರಯೋಗ ಮಾಡಲು ಹಾಗೂ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂರು ದೂರದೃಷ್ಟಿ ಇಟ್ಟುಕೊಂಡು ದತ್ತಿನಿಧಿ ಸ್ಥಾಪಿಸುವದಾಗಿ ಘೋಷಿಸಲಾಯಿತು. ಇದರಂತೆ ಯುವ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವದು, ಜನರಲ್ಲಿ ಅಂತರ್ ಯೋಗ ಮೂಡಿಸಲು ಯೋಗ, ಬಡವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕೆ ನಿಧಿ ಸ್ಥಾಪನೆ ಮಾಡಲಾಯಿತು. ಭಕ್ತಾಧಿಗಳು 5 ಸಾವಿರ ಧನಸಹಾಯದ ಮೂಲಕ ಪ್ರೋತ್ಸಾಹ ನೀಡುವಂತೆ ಅಧ್ಯಕ್ಷ ಬೋಧಸ್ವರೂಪನಂದಜೀ ಕೋರಿದರು.

ಬದುಕಲು ಕಲಿಯಿರಿ ಕೃತಿಯ ಜನಪ್ರಿಯತೆ ಕಂಡು ಮೈಸೂರಿನಲ್ಲಿ ಬದುಕಲು ಕಲಿಯಿರಿ ಉತ್ಸವ ನಡೆಸುವ ಬಗ್ಗೆ ಶೃದ್ಧಾಂಜಲಿ ಸಭೆಯಲ್ಲಿ ಘೋಷಿಸಲಾಯಿತು. ಹಸ್ತಾಕ್ಷರದ ಮೂಲಕ ಪತ್ರದಲ್ಲಿ ಎಲ್ಲಾ ಭಕ್ತರಿಗೂ ಸಕಾರಾತ್ಮಕವಾಗಿ ಸಾಧನೆ ಮಾಡಲು ಉತ್ಸುಕತೆಯಲ್ಲಿದ್ದ ಅವರ ಹಸ್ತಾಕ್ಷರದ ವಿಶೇಷ ಸಂಚಿಕೆ ಹೊರತರುವ ಚಿಂತನೆ ಇದೆ ಎಂದು ಅಧ್ಯಕ್ಷ ಬೋದ ಸ್ವರೂಪನಂದಜೀ ಘೋಷಿಸಿದರು.

ಅರಮೇರಿ ಕಳಂಚೇರಿ ಮಠದ ಸ್ವಾಮೀಜಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣ ಹೇಳಿದಂತೆ ಯಾರಿಗೆ ಸಾವಿರುತ್ತದೋ ಅವರು ಮತ್ತೆ ಹುಟ್ಟಿಬರಬೇಕು. ಜಗದಾತ್ಮನಂದಾಜೀ ಕೂಡ ಮತ್ತೆ ಹುಟ್ಟಿ ಬರಬೇಕಿದೆ. ಅವರು ಪೊನ್ನಂಪೇಟೆಯಲ್ಲಿ ನಿರ್ಮಿಸಿರುವ ವಿಶ್ವಭಾವೈಕ್ಯತಾ ಮಂದಿರ ಎಂದಿಗೂ ಭಾವೈಕ್ಯತೆಯ ಸಂಕೇತವಾಗಿದೆ. ಎಲ್ಲರಿಗೂ ಪ್ರೀತಿ ಹಂಚಿದ ಇವರು ಪರಿಪೂರ್ಣ ಶ್ರೇಷ್ಟ ಸಂತ ಎಂದರು.

ನಿತ್ಯಾಸ್ತನಂದಜೀ ಮಾತನಾಡಿ, ಹೃದಯವಂತಿಕೆ, ವೈಚಾರಿಕತೆ, ಭಕ್ತಿಭಾವ ಹಾಗೂ ಜನಸೇವೆ ಚಿಂತನೆಯಲ್ಲಿದ್ದ ಸನ್ಯಾಸಿಯಾಗಿದ್ದರು. ಸೇವೆ, ಸಾಧನೆ, ಪರಹಿತ ಚಿಂತನೆಯ ಇವರು ವಿಶೇಷತೆಯಲ್ಲಿಯೇ ಬದುಕು ಸಾಗಿಸಿದವರು ಎಂದರು.

ಸನ್ಯಾಸಿಗಳಾದ ಸ್ವಾಮೀ ತಪೋಯಜ್ಞನಂದಜೀ, ಆತ್ಮಾವಿನಂದಾಜಿ, ಸತ್ಯೇಶನಂದಾಜೀ, ಆತ್ಮನಂದಾಜೀ, ನಿರ್ಭಯಾನಂದಾಜೀ, ಜಿಟಕಾನಂದಾಜೀ, ಮುಕ್ತಿನಂದಾಜೀ, ಚಲ್ಲಕೆರೆ ಮಠದ ತ್ಯಾಗಮಹಿ, ಸಲಹಾ ಸಮಿತಿ ಸದಸ್ಯ ಕೆ.ಪಿ. ಉತ್ತಪ್ಪ, ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ, ಭಕ್ತಾಧಿಗಳಾದ ಹರೀಶ್, ಕೆ. ಎನ್. ಹೆಗ್ಡೆ ಇವರುಗಳಿಂದ ಜಗದಾತ್ಮಾನಂದಜೀಗೆ ನಮನ ಸಲ್ಲಿಸಲಾಯಿತು.

ಶಾಂಭವಾನಂದಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದ ಮೂಲಕ ಶೃದ್ಧಾಂಜಲಿ ನಡೆಯಿತು. ಸ್ವಾಮಿ ಸ್ವತ್ಮರಾಮನಂದಜೀ ಅವರಿಂದ ಭಜನೆ ಹಾಗೂ ಹಾಡು ಮೂಡಿಬಂತು. ಪರಹಿತನಂದಾಜಿ ಅವರಿಂದ ವೇದಿಕ್ ಪಠಣ ನಡೆಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆನೆಸಿಕೊಳ್ಳಲಾಯಿತು.

ಪೂಜೆ, ಹೋಮ.. ನಮನ, ಅನ್ನದಾನ

ಪೂಜೆ, ಹೋಮ ಮತ್ತು ಆರತಿ, ಪುಷ್ಪಾರ್ಚನೆ, ಅನ್ನದಾನ ಮೂಲಕ ನುಡಿನಮನ ಸಲ್ಲಿಸಲಾಯಿತು. ಬದುಕಲು ಕಲಿಯಿರಿ ಪುಸ್ತಕ ಶೇ. 50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸ್ವಾಮೀಜಿ ಅವರ ಹಸ್ತಾಕ್ಷರದ ಬರಹಗಳ ಆಯ್ದ ತುಣುಕುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಶಾಂತಿ ಕೋರಿದರು. ಅವರ ಹೆಸರಿನಲ್ಲಿ ಪ್ರಸಾದ ಸ್ವೀಕರಿಸಿದರು. ವಿದ್ಯಾರ್ಥಿಗಳು ಪಾಲ್ಗೊಂಡು ಅನ್ನದಾನ ಸ್ವೀಕರಿಸಿದರು.

-ಸುದ್ದಿಪುತ್ರ