ಮಡಿಕೇರಿ, ನ. 27: ಕಳೆದ ಆಗಸ್ಟ್‍ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವು ಮಾನವ ನಿರ್ಮಿತ ಎಂದು ಭಾರತೀಯ ಭೂಗರ್ಭ ಸಮೀಕ್ಷಾ ತಜ್ಞರು (ಜಿ.ಎಸ್.ಐ) ಜಿಲ್ಲ್ಲಾಧಿಕಾರಿ ಮತ್ತು ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಅತಿ ಬಾಲಿಶವಾದುದು ಎಂದು ಕೊಡಗಿನ ಪರಿಶೋಧನಾ ಭೂ ವಿಜ್ಞಾನಿ ಐಚೆಟ್ಟಿರ ಜಿ. ಮಾಚಯ್ಯ ಬಣ್ಣಿಸಿದ್ದಾರೆ.ಈ ರೀತಿಯ ವರದಿ ಮೂಲಕ ಸಾಮಾನ್ಯ ಜನರನ್ನೇ ಬಲಿಪಶುಗಳಾಗಿ ಮಾಡಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಚೌಕಾಸಿ ಮಾಡುವ ಷಡ್ಯಂತ್ರ ಸರಕಾರದ್ದಾಗಿರಬಹುದೇ ಎನ್ನುವ ಸಂಶಯ ಮೂಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಐ. ಜಿ. ಮಾಚಯ್ಯ ಅವರ ಪ್ರತಿಕ್ರಿಯೆಯ ವಿವರ ಈ ಕೆಳಗಿನಂತಿÀದೆ.ವರದಿ ನೀಡಿರುವ ಭೂಗರ್ಭ ವಿಜ್ಞಾನಿಗಳಿಗೆ ಸರಳ ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ. ರಸ್ತೆಗಳು, ಮನೆಗಳು, ರಿಸಾರ್ಟ್‍ಗಳು, ಪ್ಲಾಂಟೇಶನ್‍ಗಳು, ಕೊಳಗಳು ಈ ಅನಾಹುತಕ್ಕೆ ಕಾರಣ ಎಂದು ಈ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ವನ್ಯಧಾಮ ಪ್ರದೇಶದ ಸುತ್ತ ಯಾವದೇ ಅನಾಹುತ ಏಕೆ ಆಗಲಿಲ್ಲ? ಈ ಪ್ರದೇಶದಲ್ಲಿ ರಸ್ತೆ, ಮನೆ, ಕೊಳ, ಪ್ಲಾಂಟೇಶನ್ ಏನೂ ಇಲ್ಲವೇ? ಜಿಲ್ಲೆಯ ಇತರ ಭಾಗಗಳಲ್ಲಿ ಬಿದ್ದಷ್ಟೆ ಮಳೆಯಾಗಿದ್ದರೂ ಇತರ ಭಾಗಗಳಲ್ಲಿ ಸಂಭವಿಸಿದಷ್ಟು ತೀವ್ರ ಅನಾಹುತ ಈ ಪ್ರದೇಶದಲ್ಲಿ ಆಗಲಿಲ್ಲ.

(ಮೊದಲ ಪುಟದಿಂದ) ರಸ್ತೆಗಳು, ಮನೆಗಳು, ರಿಸಾರ್ಟ್‍ಗಳು, ಪ್ಲಾಂಟೇಶನ್‍ಗಳು, ಕೊಳಗಳು ಅನಾಹುತಕ್ಕೆ ಕಾರಣ ಎನ್ನುವದಾದರೆ ಪುಷ್ಪಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಇಂತಹ ಯಾವದೇ ಕಾರ್ಯ ಚಟುವಟಿಕೆಯಿಲ್ಲದಿದ್ದು, ಮಾನವನ ಮಧ್ಯ ಪ್ರವೇಶಕ್ಕೆ ಅವಕಾಶವೆ ಇಲ್ಲದಿದ್ದರು ಈ ಪ್ರದೇಶದಲ್ಲಿ ಭಾರೀ ಭೂಕುಸಿತ, ಅನಾಹುತವಾಗುವದಕ್ಕೆ ಕಾರಣವೇನು? ಸಮೀಕ್ಷೆ ನಡೆಸಿದ ತಜ್ಞರೆನಿಸಿಕೊಂಡವರಿಗೆ ಕೊಡಗಿನ ಸ್ಥಳೀಯ ಭೌಗೋಳಿಕತೆ, ನೈಜತೆ, ಸತ್ಯಾಂಶಗಳ ಪೂರ್ಣ ಪರಿಚಯವಿದೆಯೇ? ಅಥವಾ ಈ ಮಂದಿ ಪ್ಯಾರಾಚೂಟ್‍ನಲ್ಲಿ ಸಂಚರಿಸಿ ಗಗನದಿಂದಲೇ ಸಮೀಕ್ಷೆ ನಡೆಸಿದ್ದಾರ?

ಸ್ವಯಂ ನೇಮಿತ ಪರಿಸರವಾದಿಗಳು, ಗಗನ ತಾರಾಗಣಗಳ ರಕ್ಷಕರು ಎಂದು ಭಾವಿಸಿರುವವÀರ ತಾಳಕ್ಕೆ ತಕ್ಕಂತೆ ಉಪಾಯದಿಂದ ಈ ವರದಿಯನ್ನು ತಯಾರಿಸಲಾಗಿದೆ.

ಜಿ.ಎಸ್.ಐ. ನೀಡಿದ ವರದಿಯಲ್ಲಿ ಹಾರಂಗಿ ಸುತ್ತಮುತ್ತ ಸಂಭವಿಸಿದ ಅನಾಹುತದ ಬಗ್ಗೆ ಈ ಮಂದಿ ಏಕೆ ಪ್ರಸ್ತಾಪಿಸಿಲ್ಲ? ಸರಕಾರೀ ನಿರ್ಮಿತ ಅಣೆಕಟ್ಟೆಯಿಂದ ಸಂಭವಿಸಿದ ಅನಾಹುತ ಮಾನವ ನಿರ್ಮಿತ ಅಲ್ಲವೇನು? ಹಾರಂಗಿÀ ಅಣೆಕಟ್ಟೆ ದೈವ ನಿರ್ಮಿತವೇನು? ಇಲ್ಲಿ ತಾರತಮ್ಯವೇಕೆ? ಸರಕಾರೀ ನಿರ್ಮಿತ ಅಣೆಕಟ್ಟೆಯಾದುದರಿಂದ ಈ ಅಂಶವನ್ನು ಕೈ ಬಿಡಲಾಗಿದೆ. ವರದಿಯಲ್ಲಿ 105 ಭೂಕುಸಿತ ಪ್ರಕರಣಗಳ ಪೈಕಿ 68 ಪ್ರÀಕರಣಗಳು ಒಂದಕ್ಕೊಂದು ತಾಳೆ ಹೊಂದುತ್ತವೆ, ಭೂ ರೂಪ ರೇಖಾಕೃತಿಗಳಿಂದಲೇ ಉಂಟಾಗಿದೆ ಎಂದು ತಿಳಿಸಲಾಗಿದೆ. ಅನಾಹುತಕ್ಕೆ ಬೆಳೆಗಾರರನ್ನು, ರಿಸಾರ್ಟ್ ಮಾಲೀಕರನ್ನು ಹೊಣೆ ಮಾಡಿದ ಬಳಿಕ ಕೊನೆಯದಾಗಿ ಈ ಅಂಶವನ್ನು ಬರೆದಿರುವದು ಸಂಶಯಕ್ಕೆ ಎಡೆ ಮಾಡಿದೆ. ಶೇ. 70 ರಷ್ಟು ಪ್ರಕರಣಗಳೂ ಒಂದಕ್ಕೊಂದು ತಾಳೆ ಹೊಂದುವದಾದರೆ, ಭೂ ರೂಪ ರೇಖಾಕೃತಿಗಳಿಂದ ಸಂಭವಿಸರುವದು ಎಂದು ಸ್ಪಷ್ಟವಾದ ಮೇಲೆ ಅದಕ್ಕೆ ನೈಸರ್ಗಿಕ ಕಾರಣಗಳೆ ಹೊರತು ಮಾನವ ನಿರ್ಮಿತ ಅಲ್ಲ ಎನ್ನುವದು ಅವರ ವರದಿಯಿಂದಲೇ ಸ್ಪಷ್ಟವಾಗುತ್ತದೆ. ಆದರೆ, ವರದಿಯಲ್ಲಿ ವ್ಯತಿರಿಕ್ತವಾಗಿ “ಮಾನವ ನಿರ್ಮಿತ” ಎಂದು ಉಲ್ಲೇಖಿಸಿರುವದರ ಉದ್ದೇಶ ತೀರಾ ಸಂಶಯಾಸ್ಪದ. ರಾಜಕಾರಣಿಗಳು ಸಾಮಾನ್ಯವಾಗಿ ತಮಗೆ ಖಾಯಿಲೆ ಬಂದಾಗ ಸರಕಾರಿ ವೈದ್ಯರ ಬಳಿ ತೆರಳುವದಿಲ್ಲ. ತಮ್ಮ ಮನೆ ನಿರ್ಮಿಸುವಾಗ ಸರಕಾರೀ ಇಂಜಿನಿಯರ್‍ನ ಸಲಹೆ ಕೇಳುವದಿಲ್ಲ. ಆದರೆ, ತಮಗೆ ಬೇಕಾದಾಗ ಸರಕಾರೀ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಾರೆ. ಅದೇ ರೀತಿ ಸರಕಾರಿ ಭೂ ವಿಜ್ಞಾನಿಗಳನ್ನು ಕೊಡಗಿನ ಅನಾಹುತದ ವರದಿ ತಯಾರಿಕೆಗೆ ಬಳಸಿಕೊಂಡಿದ್ದಾರಷ್ಟೆ. ನೈಜ ಕಾಳಜಿಯಿದ್ದಲ್ಲಿ ಸ್ವತಂತ್ರÀವಾಗಿ ಕಾರ್ಯ ನಿರ್ವಹಿಸುವ ಭೂರೂಪ ಶಾಸ್ತ್ರಜ್ಞರನ್ನು ಅಥವ ಭೂಕುಸಿತ ತಜ್ಞರನ್ನು ವಿದೇಶಗಳಿಂದಲಾದರೂ ಕರೆಸಲಿ. ಭೂಗರ್ಭ ವಿಜ್ಞಾನವೆನ್ನುವದು ಅತ್ಯಂತ ವಿಶಾಲ ಕ್ಷೇತ್ರವಾಗಿದೆ. ವೈದ್ಯಕೀಯ ವಿಭಾಗದಲ್ಲಿ ಹೇಗೆ ಮೂಳೆ ತಜ್ಞರು, ಹೃದ್ರೋಗ ತಜ್ಞರು ಮೊದಲಾಗಿ ಬೇರೆ ಬೇರೆ ವಿಭಾಗಗಳಿದ್ದಾರೋ ಅದೇ ರೀತಿ ಭೂವಿಜ್ಞಾನದಲ್ಲಿಯೂ ಬೇರೆ ಬೇರೆ ವಿಶೇಷ ತಜ್ಞರಿದ್ದಾರೆ. ಅಂತಹವರನ್ನು ಹೆಚ್ಚಿಗೆ ಹಣ ಖರ್ಚಾದರೂ ವಿದೇಶದಿಂದಲಾದರೂ ಕರೆಸಿ ಸಮೀಕ್ಷೆ ನಡೆಸುವದರಿಂದ ಸ್ಪಷ್ಟ ಹಾಗೂ ಖಚಿತ ಮಾಹಿತಿ ಲಭ್ಯವಾಗುತ್ತದೆ. ಪ್ರಸ್ತುತ ಜಿ.ಎಸ್. ಐ ನಡೆಸಿರುವ ಸಮೀಕ್ಷೆ ಪ್ರೌಢಶಾಲಾ ವರದಿಯಂತಿದೆ. 220 ಪುಟಗಳ ವರದಿಯಲ್ಲಿ 150 ಪುಟಗಳು ರಸ್ತೆ ಬದಿಯ ಕಳಪೆ ಗುಣಮಟ್ಟದ ಕಾರುಗಳ ಚಿತ್ರ ಹಾಗೂ ಸ್ಥಳೀಯ ಜಾಗಗಳ ಅಂಕಿ ಅಂಶಗಳನ್ನಷ್ಟೇ ಒಳಗೊಂಡಿದೆ. ಕಾರಿನಲ್ಲಿ ಕುಳಿತುಕೊಂಡೇ ಭಾವಚಿತ್ರÀಗಳನ್ನು ತೆಗೆದಂತಿದೆ. ಭೂಕುಸಿತಕ್ಕೆ ಮುಖ್ಯ ಕಾರಣ ಪ್ರವಾಸೋದ್ಯಮದ ಪರಿಣಾಮ ಹಾಗೂ ಕೃಷಿಕರು ಕೂಡ ಕಾರಣ ಎಂಬ ರೀತಿಯ ಕೃತ್ರಿಮತೆಯ ಚಿತ್ರಣ ನೀಡಲಾಗಿದೆ.